ಜನರ ಆತಂಕಕ್ಕೆ ಕಾರಣವಾದ ಘಟನೆ ಹಗಲುಹೊತ್ತಿನಲ್ಲಿ 2 ಲಕ್ಷ 20 ಸಾವಿರ ರೂ. ಎಗರಿಸಿದ ಖದೀಮರು
ತಾಳಿಕೋಟೆ:ಮೇ.17: ಸಂಸಾರದ ಅಡಚಣೆಗಾಗಿ ತನ್ನ ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣದಲ್ಲಿಯ 2 ಲಕ್ಷ 20 ಸಾವಿರ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೇಳೆಯುವಂತೆ ಮಾಡಿ ಮತ್ತೊಬ್ಬನು ಹಣವನ್ನು ಕಿತ್ತುಕೊಂಡು ಬೈಕ್ ಹತ್ತಿ ಪರಾರಿಯಾದ ಘಟನೆ ತಾಳಿಕೋಟೆ ಪಟ್ಟಣದಲ್ಲಿ ಗುರುವಾರರಂದು ನಡೆದಿದೆ.
ಘಟನೆಯ ವಿವರಣೆ :
ತಾಳಿಕೋಟೆ ಪಟ್ಟಣದ ನಾಗಪ್ಪ ಅಮ್ರಪ್ಪ ಕೇಂಭಾವಿ(61) ತಾಲೂಕಿನ ಕೊಡಗಾನೂರ ಗ್ರಾಮದ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಎಸ್‍ಡಿಸಿಯಾಗಿ ಸೇವೆ ಸಲ್ಲಿಸಿ ಕಳೆದ 1 ವರ್ಷದ ಹಿಂದೆ ನಿವೃತ್ತಿ ಹೊಂದಿದ ವ್ಯಕ್ತಿ ಹಣ ಕಳೆದುಕೊಂಡವನಾಗಿದ್ದು ತನ್ನ ವ್ಯವಹಾರಕ್ಕಾಗಿ ಮೊದಲಿನಿಂದಲೂ ಪಟ್ಟಣದ ಯೂನಿಯನ್ ಬ್ಯಾಂಕ್‍ನಲ್ಲಿ ಎಸ್.ಬಿ.ಖಾತೆ ತೆಗೆದು ವ್ಯವಹಾರ ಮಾಡುತ್ತಿದ್ದ.
ಗುರುವಾರರಂದು ಬೆಳಿಗ್ಗೆ 11-40 ಗಂಟೆಯ ಸುಮಾರಿಗೆ ಯೂನಿಯನ್ ಬ್ಯಾಂಕಿಗೆ ಹೋಗಿ ತನಗೆ ಅವಶ್ಯವಿದ್ದ 2 ಲಕ್ಷ 20 ಸಾವಿರ ರೂ. ನಗದನ್ನು ಚೆಕ್ ಮೂಲಕ ಡ್ರಾ ಮಾಡಿಕೊಂಡು ಮನೆಗೆ ಹೋಗಲು ಬೈಕ್ ಹತ್ತಿ ಹಣವನ್ನು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ನಲ್ಲಿ ಇಟ್ಟುಕೊಂಡು ಬೈಕಿನ ಮುಂದಿನ ಟ್ಯಾಂಕ್ ಕವರ್‍ನಲ್ಲಿ ಇಟ್ಟು ಕಿಕ್ ಹೊಡೆಯುತ್ತಿದ್ದ ಸಮಯದಲ್ಲಿ ಹಣ ದೋಚುವದಕ್ಕೆಂದೆ ಹೊಂಚು ಹಾಕಿ ಕುಳಿತ್ತಿತ್ತು ಇಬ್ಬರು ಖದೀಮರು ಬಂದು ಬಸ್ಟ್ಯಾಂಡ್ ದಾರಿ ಯಾವಕಡೆಗೆ ಬರುತ್ತದೆ ಎಂದು ಹಿಂಬದಿಯಿಂದ ಕೇಳಿದಂತೆ ಮಾಡಿದಾಗ ಕೈ ಮಾಡಿ ದಾರಿ ತೋರಿಸುವಷ್ಟರಲ್ಲಿಯೇ ಮತ್ತೊಬ್ಬನು ಬೈಕ್ ಟ್ಯಾಂಕಿನಲ್ಲಿದ್ದ ಹಣವನ್ನು ಕಿತ್ತುಕೊಂಡು ರಸ್ತೆಯ ಬದಿಯಲ್ಲಿಯೇ ಚಾಲು ಸ್ಥಿತಿಯಲ್ಲಿಯೇ ತಾನು ನಿಲ್ಲಿಸಿದ್ದ ಬೈಕ್ ಹತ್ತಿದ್ದಾನೆ ಇನ್ನೊಬ್ಬನು ಕೂಡೂ ಓಡಿ ಹೋಗಿ ಬೈಕ್ ಹತ್ತಿ ರಬಸದ ವೇಗದಲ್ಲಿ ಪಟ್ಟಣದ ಬಸವೇಶ್ವರ ವೃತ್ತದ ಕಡೆಯ ರಸ್ತೆಯಲ್ಲಿ ಪ್ರವೇಶ ಮಾಡಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ತನ್ನ ಬೈಕ್ ರಸ್ತೆ ಬದಿಯಿಂದ ಹಿಂದಕ್ಕೆ ಸರಿಸಿಕೊಂಡು ಬೆನ್ನಟ್ಟಿ ಹೋದರೂ ಕೂಡಾ ಆತನ ಕಣ್ಣಿಗೆ ಕಾಣದ ಹಾಗೆ ಪರಾರಿಯಾಗಿದ್ದಾರೆಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಣ ಕಿತ್ತುಕೊಂಡ ಹೋದ ಖದೀಮರ ವಯಸ್ಸು ಅಂದಾಜು 30 ರಿಂದ 35 ಇರಬಹುದು ಬ್ರೌನ್ ಬಣ್ಣದ ಹಾಪ್ ಶರ್ಟ ಧರಿಸಿದ್ದರೆಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ನಾಗಪ್ಪ ಕೇಂಭಾವಿ ಅವರು ತಿಳಿಸಿದ್ದಾರೆ.
ಘಟನಾ ವಿಷಯ ಅರೀತ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಬೆಟ್ಟಿ ನೀಡಿದ್ದು ಸಂಪೂರ್ಣ ಮಾಹಿತಿ ಕಲೆ ಹಾಕುವದರೊಂದಿಗೆ ಆರೋಪಿತರ ಶೋದನಾ ಕಾರ್ಯ ಚುರುಕುಗೊಳಿಸಿದ್ದಾರೆ.
ಆತಂಕಕ್ಕೆ ಕಾರಣವಾದ ಘಟನೆ
ಹಗಲು ಹೊತ್ತಿನಲ್ಲಿಯೇ 2 ಲಕ್ಷ 20 ಸಾವಿರ ರೂ.ಯನ್ನು ವ್ಯಕ್ತಿಯ ಗಮನ ಬೆರೆಡೆ ಸೇಳೆಯುವದರೊಂದಿಗೆ ಹಣವನ್ನು ಕಿತ್ತುಕೊಂಡು ಹೋಗಿರುವದು ಕಾಡ್ಗಿಚ್ಚಿನಂತೆ ಸುದ್ದಿ ಹರಡಿದ್ದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ ಬ್ಯಾಂಕಿನ ಒಳಗಡೆ ಸಿಸಿ ಟಿವಿ ಅಳವಡಿಸಲಾಗಿದೆ ಆದರೆ ಬ್ಯಾಂಕಿನ ಹೊರಗಡೆ ಯಾವುದೇ ಸಿಸಿ ಟಿವಿ ಅಳವಡಿಕೆ ಮಾಡದಿರುವದು ಬ್ಯಾಂಕಿನವರ ಲೋಪ ಎದ್ದು ಕಾಣುತ್ತಿದ್ದು ಕೂಡಲೇ ಬ್ಯಾಂಕಿನ ಹೊರಗಡೆಯೂ ಸಿಸಿ ಟಿವಿ ಅಳವಡಿಸುವದರೊಂದಿಗೆ ಬ್ಯಾಂಕಿಗೆ ಬದ್ರತಾ ಸಿಬ್ಬಂದಿಯನ್ನು ನಿಯೋಜನೆ ಗೊಳಿಸಬೇಕೆಂಬುದು ಜನಾಗ್ರಹವಾಗಿದೆ.