ಮಹಾರಾಜವಾಡಿಯಲ್ಲಿ ಬಸವೇಶ್ವರರ ಪುತ್ಥಳಿ ಅನಾವರಣ
ಔರಾದ್ : ಮೇ.17:12ನೇ ಶತಮಾನದಲ್ಲಿಯೇ ನಾಡಿನಲ್ಲಿ ಸಮಾನತೆಗಾಗಿ ಹೋರಾಟ ಮಾಡಿದ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ತಾಲೂಕಿನ ಮಹಾರಾಜವಾಡಿಯಲ್ಲಿ ಗುರುವಾರ ಅನಾವರಣಗೊಂಡಿತ್ತು.
ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಮಹಾನ್ ಮಾನವತವಾದಿ ಹಾಗೂ ಸಮಾಜ ಸುಧಾರಕ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ .ಗೌತಮ ಬುದ್ಧನ ನಂತರ ಬಸವಣ್ಣನವರು ಅತ್ಯಂತ ವೇಗವಾಗಿ ಸಮಾಜ ಸುಧಾರಣೆ ಕಾರ್ಯಗಳಿಗೆ ಚಾಲನೆ ನೀಡಿದವರಾಗಿದ್ದು, ಆಗಿನ ಕಾಲದಲ್ಲಿ ಸಮಾನತೆಗಾಗಿ ಶ್ರಮಿಸಿದ್ದಾರೆ ಎಂದರು.
ಯಾವ ವ್ಯಕ್ತಿ ತನ್ನ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಾನೋ ಮತ್ತು ಪರೋಪಕಾರಿ ಮನೋಭಾವ ಹೊಂದುತ್ತಾನೋ ಅಂಥವನು ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂಬುದನ್ನು ಒತ್ತಿ ಹೇಳಿದ ಬಸವಣ್ಣ, ವಚನಗಳ ಮೂಲಕವೇ ಜೀವನದ ಪಾಠ ಕಲಿಸಿದ ಮಹಾನ್ ಶರಣ ಎಂದು ಹೇಳಿದರು. ಬಾಲ ಬಸವನಿಂದ ಜಗಜ್ಯೋತಿ ಬಸವೇಶ್ವರ ಆದ ಅವರ ಸಾಧನೆ ಮತ್ತು ಸಮಾನತೆಯ ಮಂತ್ರ ಸರ್ವಕಾಲಿಕವಾದುದು ಎಂದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ಬಸವಣ್ಣನವರು ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಂಡು ಶಿಕ್ಷಣ, ಸಾಮಾಜಿಕ ಚಿಂತನೆಗಳ ಬಗ್ಗೆ 12ನೇ ಶತಮಾನದಲ್ಲಿಯೇ ಧ್ವನಿ ಎತ್ತಿದ ಮಹಾಪುರುಷ. ಅಂತಹ ಮಹಾನ್ ವ್ಯಕ್ತಿಗಳ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ ಮಾಲಿಪಾಟೀಲ, ವಿಶ್ವನಾಥ ಗೋಡೆ, ಓಂಕಾರ ಬಿರಾದಾರ್, ಸಂಗಪ್ಪ ಬಿರಾದಾರ್, ನಾಗಪ್ಪ ಅಮಲಾಪೂರೆ, ಸೋಮನಾಥ ಅಮಲಾಪೂರೆ, ಧನರಾಜ ಬೆನಕನಳ್ಳೆ, ವಿಜಯಕುಮಾರ ಮಾಲಿಪಾಟೀಲ್, ಸಂಜೆಗೋಡೆ, ಶಿವಕುಮಾರ ಬಿರಾದಾರ್, ಶರಣಪ್ಪ ಬಿರಾದಾರ್, ಮಾದಪ್ಪ ಹುಲಸೂರೆ, ಶ್ರೀನಿವಾಸ ಹುಲಸೂರೆ ಸೇರಿದಂತೆ ಅನೇಕರಿದ್ದರು.