ಭೂ ಹಗರಣ ತನಿಖೆ ಸಿಐಡಿಗೆ ವಹಿಸದಿದ್ದರೆ ಉಗ್ರ ಹೋರಾಟ: ಮಾಜಿ ಸಚಿವ ಪಟ್ಟಣಶೆಟ್ಟಿ ಎಚ್ಚರಿಕೆ
ವಿಜಯಪುರ,ಮೇ.17: ನಗರದಲ್ಲಿ ಲಂಗು ಲಗಾಮು ಇಲ್ಲದೆ ನಡೆಯುತ್ತಿರುವ ಭೂ ಹಗರಣ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಈ ಪ್ರಕರಣಗಳ ಸಮಗ್ರ ತನಿಖೆಗೆ ಸಿಐಡಿ ತನಿಖೆ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವು ಅಧಿಕಾರಿಗಳು ಹಲವು ವರ್ಷಗಳಿಂದ ಒಂದೇ ಇಲಾಖೆ ಹಾಗೂ ಹುದ್ದೆಯಲ್ಲಿ ಬೀಡು ಬಿಟ್ಟಿದ್ದಾರೆ. ವಿಜಯಪುರ ಉಪ ನೋಂದಣಿ ಅಧಿಕಾರಿ ಹಲವು ವರ್ಷಗಳಿಂದ ವರ್ಗಾವಣೆಗೊಂಡಿಲ್ಲ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆ ಅಧಿಕಾರಿ ವರ್ಗವಾಗುವುದಿಲ್ಲವೆಂದರೆ ಇದರಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದು ಹೇಳಲಾಗದು. ಭೂ ಹಗರಣದಲ್ಲಿ ಕೇವಲ ಉಪ ನೋಂದಣಿ ಅಧಿಕಾರಿ ಮಾತ್ರವಲ್ಲ ಬಾಂಡ್ ರೈಟರ್, ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರವೂ ಈ ಹಗರಣದಲ್ಲಿ ಕಂಡು ಬರುತ್ತಿದೆ. ಹೀಗಾಗಿ ಈ ಭೂಹಗರಣ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಕೆಲವು ದಿನಗಳ ಹಿಂದೆ ಈ ಬಗ್ಗೆ ಸಭೆ ನಡೆಸಿದ್ದರು. ಆ ಬಳಿಕ ಅದರ ಫಲಿತಾಂಶ ಬರಲೇ ಇಲ್ಲ. ಇತಂಹ ಪ್ರಕರಣಕ್ಕೂ ಕಡಿವಾಣ ಬಿದ್ದಿಲ್ಲ. ಹೀಗಾಗಿ ದುಡಿದು ಹಣ ಹೊಂದಿಸಿ, ಜಮೀನು ಖರೀದಿಸಿದ ಬಡ ಜನತೆ ಆತಂಕಕ್ಕೊಳಗಾಗಿದ್ದಾರೆ. ಬಹಳಷ್ಟು ಜನರು ಮೋಸ ಹೋಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸಿಐಡಿ ತನಿಖೆ ಮೂಲಕ ನೊಂದವರಿಗೆ ನ್ಯಾಯ ಕೊಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಅಕ್ರಮಕ್ಕೆ ಶಾಶ್ವತವಾಗಿ ಕಡಿವಾಣ ಹಾಕಬೇಕು ಎಂದರು.
ಈ ಹಿಂದೆ ನಾನೂ ಸಹ ಭೂ ಹಗರಣ ತಡೆಗೆ ಸಿಐಡಿ ತನಿಖೆ ನಡೆಸಲು ಹಿಂದಿನ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿರುವೆ. ಸದ್ಯ ಮತ್ತೆ ಇತ್ತೀಚಿನ ಪ್ರಕರಣದಲ್ಲಿ ನ್ಯಾಯ ಕಲ್ಪಿಸಲು ಸಿಐಡಿ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರಿಗೆ ಮನವಿ ಮಾಡಲಾಗುವುದು. ಒಂದೊಮ್ಮೆ ಸಿಐಡಿಗೆ ವಹಿಸದೇ ಇದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು. ಈ ಬಗ್ಗೆ ಒಂದು ತಿಂಗಳ ಕಾಲಾವಕಾಶ ಗಡವು ನೀಡಲಾಗುವುದು ಎಂದರು.
ನಗರದ ಭೂ ಹಗರಣದಲ್ಲಿ ಎಲ್ಲ ಸಮಾಜದವರು, ಗೂಂಡಾಗಳು, ಪ್ರಭಾವಿಗಳು ಹಾಗೂ ಅವರ ಬೆಂಬಲಿಗರು ಇದ್ದಾರೆ. ಆಸ್ತಿ ಮಾಲೀಕರ ವಿವರ ಕಲೆ ಹಾಕಿ, ಖೊಟ್ಟಿ ದಾಖಲೆ ಸೃಷ್ಟಿಸಿ ಉಪ ನೋಂದಣಿ ಅಧಿಕಾರಿಗಳ ಸಹಾಯದಿಂದ ಜಮೀನು ಕಬಳಿಸುವ ದೊಡ್ಡ ಗ್ಯಾಂಗ್ ಇದೆ. ಸುಮಾರು 200 ಪ್ರಕರಣಗಳು ದಾಖಲಾಗಿವೆ. ತಹಸೀಲ್ದಾರ್ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಒಳಗೊಂಡ ದೊಡ್ಡ ಜಾಲ ಇದರಲ್ಲಿದೆ ಎಂದು ದೂರಿದರು.
ಇನ್ನು ಬೆಟ್ಟಿಂಗ್ ದಂಧೆ, ಹಾಡಹಗಲೇ ಕೊಲೆ, ಭೂ ಹಗರಣದ ಮೂಲಕ ವಿಜಯಪುರ ಜಿಲ್ಲೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಬೆಟ್ಟಿಂಗ್ ದಂಧೆ ನಡೆಸುವವರು ರಾಜಕೀಯ ಪಕ್ಷಗಳ ಧುರೀಣರಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬೆಟ್ಟಿಂಗ್ ದಂಧೆಯಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಯುವಜನತೆ ದಾರಿ ತಪ್ಪುತ್ತಿದೆ. ಪೆÇಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದರು.