ಶಂಕರ ಮಠದಲ್ಲಿ ನಾಳೆಯಿಂದ ಮೇ. 23 ರ ವರೆಗೆ ಶಂಕರ ಜಯಂತ್ಯುತ್ಸವ
ವಿಜಯಪುರ,ಮೇ.17 :ನಗರದ ಬಾಗಲಕೋಟೆ ರಸ್ತೆಯಲ್ಲಿರುವ ವಜ್ರ ಹನುಮಾನ ಬಡಾವಣೆಯಲ್ಲಿನ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶೃಂಗೇರಿ ಶಾಖಾ ಮಠದಲ್ಲಿ ಮೇ. 18 ರಿಂದ 23 ರ ವರೆಗೆ ಅತ್ಯಂತ ವೈಭವದಿಂದ ಶ್ರೀ ಶಂಕರ ಜಯಂತ್ಯುತ್ಸವವನ್ನು ಆಚರಿಸಲಾಗುವದು.
ಶೃಂಗೇರಿ ಪೀಠಾಧಿಪತಿ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಹಾಗೂ ಶ್ರೀ ವಿದುಶೇಖರ ಭಾರತಿ ಸ್ವಾಮಿಗಳ ಆಜ್ಞಾ ನುಸಾರ ನಡೆಯಲಿರುವ ಜಯಂತ್ಯುತ್ಸವದ ಕಾಲದಲ್ಲಿ ಮೇ 18ರಿಂದ 23ರ ವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ11 ವರೆಗೆ ರುದ್ರಾಭಿಷೇಕ, ಆರತಿ, ಮಂತ್ರ ಪುಷ್ಪ, ಮಧ್ಯಾನ್ಹ 11 ರಿಂದ ಅಪರಾಹ್ನ 12 ಗಂಟೆಗೆ ಶಾರದಾ ಮಹಿಳಾ ಭಜನಾ ಮಂಡಳಿ – ಶ್ರೀಮಾತಾ ಭಜನಾ ಮಂಡಳಿ ಸದಸ್ಯೆಯರಿಂದ ಸೌಂದರ್ಯ ಲಹರಿ ಪಠಣ, ಮಂಗಳಾರತಿ ಜರುಗಲಿವೆ.
ಪ್ರತಿದಿನ ಮಧ್ಯಾನ್ಹ 1 ಗಂಟೆಯಿಂದ 1-30 ರ ವರೆಗೆ ಸ್ಥಳೀಯ ವಿದ್ವಾಂಸರಿಂದ ಪ್ರವಚನ ನಂತರ ಮಹಾಪ್ರಸಾದ ವಿತರಣೆ ನಡೆಯಲಿವೆ. ಅಲ್ಲದೇ ಪ್ರತಿದಿನ ಸಂಜೆ 6-30 ರಿಂದ ರಥೋತ್ಸವ, ಅಷ್ಟಾವಧಾನ ಸೇವೆ, ಮಂಗಳಾರತಿ ನಡೆಯುತ್ತವೆ.
ದಿ. 20 ರಂದು ಬೆಳಿಗ್ಗೆ 11 ಗಂಟೆಗೆ ವೀಣಾ ಥಿಟೆ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ನಡೆಯಲಿದೆ. 21 ರಂದು ಪೌರ್ಣಿಮೆ ದಿನದಂದು ಶ್ರೀ ಸತ್ಯನಾರಾಯಣ ಪೂಜೆ, ಗ್ರಾಮ ಪ್ರದಕ್ಷಿಣೆ, ಅವಭೃತ ಸ್ನಾನ, ಆರತಿ ಕುಂಕುಮಾರ್ಚನೆ ನಡೆಯಲಿವೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಮೂಲಕ ಕೋರಿದೆ.