ಯುಜಿಡಿ ಕಾಮಗಾರಿಗೆ ಬರ : ಗಬ್ಬೆದ್ದ ಬಡಾವಣೆಗಳು
ಸೇಡಂ, ಮೇ,17: ಹತ್ತು ವರ್ಷ ಕಳೆದರೂ ಸಹ ಸೇಡಂನಲ್ಲಿ ಕೈಗೊಂಡಿರುವ ಯುಜಿಡಿ (ಒಳಚರಂಡಿ) ಕಾಮಗಾರಿ ಪೂರ್ಣಗೊಳ್ಳದೆ ಕಾಮಗಾರಿಗೆ ಬರ ಬಡಿದಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಅಪ್ಪಾಜಿ ಪ್ರಕಟಣೆಯಲ್ಲಿ ದೂರಿದ್ದಾರೆ.
ಪಟ್ಟಣದಲ್ಲಿ ಹತ್ತು ವರ್ಷಗಳ ಕೆಳಗೆ ಕೋಟಿಗಟ್ಟಲೆ ಸರಕಾರದ ಹಣ ಸುರಿದು ಕೈಗೊಂಡ ಕಾಮಗಾರಿ ಹಳ್ಳ ಹಿಡಿದಿದೆ. ಈಗಿನ ಸಚಿವ ಡಾ. ಶರಣಪ್ರಕಾಶ ಪಾಟೀಲರು ಇದಕ್ಕೂ ಮೊದಲು ಅಂದರೆ 6 ವರ್ಷಗಳ ಹಿಂದೆ ಸಚಿವರಾಗಿದ್ದಾಗ ತಂದ ಕಾಮಗಾರಿ ನಂತರದಲ್ಲಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಸಹ ಪೂರ್ಣಗೊಳಿಸಲಿಲ್ಲ. ಈಗ ಮತ್ತೆ ಶಾಸಕರಾಗಿ ಶರಣಪ್ರಕಾಶ ಪಾಟೀಲ ಆಯ್ಕೆಯಾಗಿದ್ದು, ಪ್ರಮಾಣ ವಚನ ಪಡೆದು ವರ್ಷ ಕಳೆದರೂ ಸಹ ಯುಜಿಡಿ ಕಾಮಗಾರಿಯ ಬಗ್ಗೆ ಕ್ಯಾರೆ ಅಂದಿಲ್ಲ. ಬೇಕಾಬಿಟ್ಟಿಯಾಗಿ ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿದೆ. ಮನೆಗಳ ಚರಂಡಿ ಸಂಪರ್ಕ ನೀಡದ ಪರಿಣಾಮ ಕೈಗೊಂಡ ಕಾಮಗಾರಿಯೂ ಮಣ್ಣಲ್ಲೆ ಮಣ್ಣಾಗುವ ಹಂತಕ್ಕೆ ಬಂದು ನಿಂತಿದೆ. ಕೆಲವರು ಸ್ವಯಂ ಯುಜಿಡಿ ಪೈಪಲೈನಗೆ ತಮ್ಮ ಡ್ರೈನ್ ಜೋಡಿಸಿಕೊಂಡಿದ್ದು, ಅದೂ ತುಂಬಿ ಮನೆಯವರ ಕಕ್ಕಸ ಊರವರ ಮೂಗಿಗೆ ರಾಚುತ್ತಿದೆ. ಇದರಿಂದ ಇಡೀ ಸೇಡಂ ಪಟ್ಟಣದ ಬಹುತೇಕ ಬಡಾವಣೆಗಳು ಗಬ್ಬೆದ್ದು ನಾರುತ್ತಿವೆ. ದಿನೇ ದಿನೇ ರೋಗಗಳ ಬೀಡಾಗುತ್ತಿದೆ. ಈ ಕುರಿತು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ. ಇಲ್ಲವಾದಲ್ಲಿ ಯುಜಿಡಿಯಿಂದಾಗುವ ಅನಾಹುತಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ನೇರ ಹೊಣೆಗಾರರಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.