15 ದಿನಗಳವರೆಗೆ ಕುಡಿಯುವ ನೀರಿನ ಸಮಸ್ಯೆಆಗದಂತೆ ಎಚ್ಚರ ವಹಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ. ಮೇ. 17: ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲಾ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ, ಇನ್ನು 15 ದಿನಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ ಮಾಹೆಯಲ್ಲಿ ಉತ್ತಮವಾಗಿ ಮಳೆ ಬರುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ 102 ಖಾಸಗಿ ಬೋರವೇಲಗಳನ್ನು ಬಾಡಿಗೆ ಪಡೆಯಲಾಗಿದೆ, 47 ಬೋರವೇಲ್ ಮೋಟಾರ ದುರಸ್ತಿ, 24 ಕಡೆ ಹೊಸ ಪೈಪಲೈನ ಮಾಡಲಾಗಿದ್ದು, ಈಗಾಗಲೇ ಬಾಡಿಗೆ ಪಡೆದ ಖಾಸಗಿ ಬೋರವೇಲ್ ಮತ್ತು ಟ್ಯಾಂಕರಗಳ ಬಿಲ್ಲುಗಳನ್ನು ಪಡೆದು ಕೂಡಲೆ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಮೋಟಾರ ದುರಸ್ತಿ, ಪೈಪಲೈನ್ ಅಳವಡಿಸಿ ಬಿಲ್ಲುಗಳನ್ನು ಸಹ ಆಡಳಿತಾತ್ಮಕ ಅನುಮೋದನೆ ಪಡೆದು ಹಣ ಪಾವತಿಗೆ ಕ್ರಮ ವಹಿಸಬೇಕು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಬೋರವೇಲ್, ಬಾವಿಗಳಿಗೆ ಯಾವುದೇ ರೀತಿ ಕಲುಷಿತ ನೀರು ಸೇರದಂತೆ ಎಚ್ಚರವಹಿಸಿ ಸ್ವಚ್ಚತೆಯನ್ನು ಕಾಪಾಡಲು ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಬದೋಲೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ವತಿಯಿಂದ 114 ಕಡೆ ಬೋರವೇಲ್, ಪ್ಲಸಿಂಗ್ ಮತ್ತು ಡ್ರಿಲಿಂಗ್ ಮಾಡಲಾಗಿದ್ದು, ಕೂಡಲೇ ಆಡಳಿತಾತ್ಮಕ ಅನುಮೋದನೆ ಪಡೆದು ಬಿಲ್ಲುಗಳನ್ನು ಪಾವತಿಸಲು ಕ್ರಮ ವಹಿಸಬೇಕು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಓವರ್ ಹೆಡ್ ಟ್ಯಾಂಕ್‍ಗಳನ್ನು ಸ್ವಚ್ಚಗೊಳಿಸಿ ಸೂಚಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಸಹಾಯಕ ಆಯುಕ್ತರಾದ ಲವೀಶ ಓರ್ಡಿಯಾ, ಎಲ್ಲಾ ತಾಲ್ಲೂಕಿನ ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರರು ಉಪಸ್ಥಿತರಿದ್ದರು.