ಬರ ಪರಿಹಾರದ ಹಣ ನೀಡಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.17: ತಾಲೂಕಿನ ತಾಳೂರು ಗ್ರಾಮದ ರೈತರು ಸರ್ಕಾರದಿಂದ ಬರಬೇಕಾದ ಬರ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿಲ್ಲ, ಸುಮಾರು 1800ಕ್ಕೂ ಹೆಚ್ಚು ರೈತರು ಗ್ರಾಮದಲ್ಲಿದ್ದು, ಕೇವಲ 808 ರೈತ ಫಲಾನುಭವಿಗಳ ಖಾತೆಗೆ ಬರಪರಿಹಾರದ ಹಣ ಜಮೇ ಯಾಗಿದೆ ಇನ್ನುಳಿದ ರೈತರಿಗೆ ಹಣ ಜಮೇ ಆಗಿಲ್ಲವೆಂದು ತಾಳೂರು ಗ್ರಾಮದ ರೈತರು ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ರಾಘವೇಂದ್ರರೆಡ್ಡಿ ಮಾತನಾಡಿ ಸರ್ಕಾರದಿಂದ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.  ಆದರೆ ಕೆಲವು ರೈತರಿಗೆ ಮಾತ್ರ ಈ ಹಣ ಜಮೇ ಆಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಸಮಿತಿಯ ನಿಬಂಧನೆಗಳ ಪ್ರಕಾರ ರೈತರ ಖಾತೆಗೆ ಹಣ ಜಮಾ ಮಾಡಬೇಕು, ಆದರೆ ಸರ್ಕಾರ ಯಾವ ನಿಬಂಧನೆಗಳನ್ನು ಪಾಲಿಸದೆ ರೈತರ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತಿದೆ. ಇದರಿಂದಾಗಿ ನಿಜವಾಗಿಯೂ ಬರ ಪರಿಹಾರ ಪಡೆಯಬೇಕಾದ ರೈತರಿಗೆ ಅನ್ಯಾಯವಾಗುತ್ತಿದೆ, ಆದ್ದರಿಂದ ಸರ್ಕಾರ ಎನ್.ಡಿ.ಆರ್.ಎಫ್ ನಿಬಂಧನೆಗಳ ಪ್ರಕಾರ ರೈತರ ಖಾತೆಗಳಿಗೆ ಹಣವನ್ನು ಜಮಾ ಮಾಡಬೇಕು, ಇಲ್ಲಿದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದೆಂದು ತಿಳಿಸಿದರು.
ರೈತರಾದ ಪಾಂಡುರಂಗಪ್ಪ, ಶಿವಪ್ಪ, ಕೆ.ಸುಧಾಕರರೆಡ್ಡಿ, ಈರಣ್ಣ, ಗಂಗಮ್ಮ, ಯಂಕಪ್ಪ, ಕೆ.ಪ್ರಹ್ಲಾದಚಾರ್, ಜಿ.ಮಲ್ಲಿಕಾರ್ಜುನರೆಡ್ಡಿ, ಬಿ.ಮಹಾನಂದರೆಡ್ಡಿ, ನಾಗರಾಜ, ವೆಂಕಟರಾಮರೆಡ್ಡಿ, ಡಿ.ವೆಂಕಟೆಶ್ ಇನ್ನಿತರರು ಇದ್ದರು.