ಕೂಡ್ಲಿಗಿ ಅಗ್ನಿಶಾಮಕ ಠಾಣೆಗೆ ಶೀಘ್ರದಲ್ಲೇ ನೂತನ ವಾಹನಗಳು  – ಶಾಸಕ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.17 :- ಕೂಡ್ಲಿಗಿ ಅಗ್ನಿಶಾಮಕ ಠಾಣೆಯಲ್ಲಿರುವ ಎರಡು ವಾಹನಗಳಲ್ಲಿ ಈಗಾಗಲೇ ಒಂದು ವಾಹನ ಅವಧಿ ಮೀರಿ ಮೂಲೆ ಸೇರಿದ್ದು ಇನ್ನೊಂದು ವಾಹನದ ಅವಧಿ ಸದ್ಯದಲ್ಲೇ ಮುಗಿಯುವ ಹಂತವಿರುವುದರಿಂದ ಕೂಡ್ಲಿಗಿ ಅಗ್ನಿಶಾಮಕ ಠಾಣೆಗೆ ನೂತನ ವಾಹನಗಳನ್ನು ಶೀಘ್ರದಲ್ಲೇ ವಿತರಣೆ ಮಾಡುವ ಬಗ್ಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಗುರುವಾರದಂದು ಸಂಜೆವಾಣಿ ಪತ್ರಿಕೆಯಲ್ಲಿ ಕೂಡ್ಲಿಗಿ ಅಗ್ನಿಶಾಮಕ ಠಾಣೆಗೆ ನೂತನ ವಾಹನಗಳ ಕೊರತೆ ಬಗ್ಗೆ ಶಾಸಕರ ಗಮನಕ್ಕೆ ಎಂದು  ಸುದ್ದಿ ಪ್ರಕಟವಾದ ಬಗ್ಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಪತ್ರಿಕೆಯೊಂದಿಗೆ ಮಾತನಾಡಿ ಅಪಾಯದ ಅಂಚಿನಲ್ಲಿರುವ ಜನರನ್ನು ಕಾಪಾಡುವ, ಬೆಂಕಿಯಿಂದ ಹೆಚ್ಚಿನ  ಅನಾಹುತದಿಂದ ತಪ್ಪಿಸುವ, ನೀರಿನಲ್ಲಿ ಮುಳುಗಿದವರನ್ನು ಮೇಲೇತ್ತುವ ಅಪಾಯಕಾರಿ ಕೆಲಸವಾದರೂ ತಮ್ಮ ಕರ್ತವ್ಯವೆಂದು ಭಾವಿಸಿ ಪಾಲನೆ ಮಾಡುವ ಅಗ್ನಿಶಾಮಕ ಸಿಬ್ಬಂದಿಗಳು ಕೂಡ್ಲಿಗಿ  ತಾಲೂಕಿನ ಅನಾಹುತ  ಘಟನಾ ಸ್ಥಳಕ್ಕೆ ಭೇಟಿ ನೀಡಲು ವಾಹನದ ಸಮಸ್ಯೆ ಇದ್ದು ಇದಕ್ಕೆ ಹಳೆಯ ವಾಹನಗಳಿರುವುದರಿಂದ ನಿಗಧಿತ ಸಮಸ್ಯೆಗೆ ತಲುಪಲು ಆಗದೇ ಇದ್ದುದರಿಂದ ಮತ್ತು ಗುರುವಾರ ಹೈವೇ 50ರಲ್ಲಿ ವಿಆರ್ ಎಲ್ ಲಾರಿಗೆ ಬೆಂಕಿ ಹತ್ತಿದ್ದು ಅದನ್ನು ಆರಿಸಲು ಕೂಡ್ಲಿಗಿ ಅಗ್ನಿಶಾಮಕ ವಾಹನ ರಿಪೇರಿ ಇದ್ದು ಇನ್ನೊಂದು ವಾಹನ ಅವಧಿ ಮುಗಿದು ಮೂಲೆ ಸೇರಿದ್ದರಿಂದ ತಕ್ಷಣ ಭೇಟಿ ಮಾಡಲು ಆಗದೇ ಪಕ್ಕದ ಕೊಟ್ಟೂರು ತಾಲೂಕಿನ ಅಗ್ನಿಶಾಮಕ ವಾಹನ ಬರುವುದರಲ್ಲಿ ಹೆಚ್ಚಿನ ರೀತಿಯ  ಬೆಂಕಿ ಹತ್ತಿ ವಾಹನ ಸುಟ್ಟು ಹೋಗಿರುವ ಬಗ್ಗೆ ತಿಳಿದಿದ್ದು  ಅತೀ ದೊಡ್ಡ ಮತ್ತು ಹಿಂದುಳಿದ ತಾಲೂಕಿನ ಹಿತದೃಷ್ಟಿಯಲ್ಲಿ ಸರ್ಕಾರಕ್ಕೆ ಶಾಸಕನಾದ ಆರಂಭದಲ್ಲೇ ಕೂಡ್ಲಿಗಿ ಅಗ್ನಿಶಾಮಕ ಠಾಣೆಗೆ ನೂತನ ವಾಹನಗಳನ್ನು ನೀಡುವ ಬಗ್ಗೆ, ಕೂಡ್ಲಿಗಿ ತಾಲೂಕಿನ ಗಡಿಭಾಗ ತಲುಪಲು 60ಕಿಲೋಮೀಟರ್ ಕ್ರಮಿಸಲು ದೂರವಾಗುವ ನಿಟ್ಟಿನಲ್ಲಿ ಗೃಹ ಸಚಿವ ಡಾ ಪರಮೇಶ್ವರ್ ಜೊತೆ ಮಾತನಾಡಿ ಕಾನಾ ಹೊಸಹಳ್ಳಿಯಲ್ಲಿ ಸ್ಪೆಷಲ್ ಕೇಸ್ ಎಂದು ಪರಿಗಣಿಸಿ  ಅನುದಾನ ನೀಡಿ  ನೂತನ ಅಗ್ನಿಶಾಮಕ ಠಾಣೆ ತೆರೆಯುವ ಬಗ್ಗೆ ಕೋರಿಕೊಂಡಿದ್ದರಿಂದ  ಅದಕ್ಕೆ ಸಚಿವರ  ಸಮ್ಮತಿ ಸಹ ಸಿಕ್ಕಿದೆ ಅಲ್ಲದೆ ಸ್ಥಳ  ಸಹ ಗುರುತಿಸಿದ್ದು ನೂತನ ಠಾಣೆ ಹಾಗೂ ವಾಹನಗಳ ಖರೀದಿಯನ್ನು ಕಲ್ಯಾಣ ಕರ್ನಾಟಕ ಅನುದಾನದಲ್ಲಿ ಬಳಕೆ  ಮಾಡಿ ಕಟ್ಟಡ ನಿರ್ಮಿಸಬಹುದು ಆದರೆ ಸಿಬ್ಬಂದಿಗಳಿಗೆ ವೇತನ ನೀಡಲು ಯಾವ ಅನುದಾನ ಬಳಕೆ ಮಾಡಬೇಕು ಎಂಬುದುರ ಬಗ್ಗೆ ಸರ್ಕಾರದ ಹಂತದಲ್ಲಿ  ಚಿಂತನೆ ನಡೆದಿದೆ ಇದರಿಂದ ನೂತನ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ತಡವಾಗಿದೆ ಎಂದು ಶಾಸಕರು ತಿಳಿಸಿದರು.
ಸದ್ಯ ಈಗ ನೀತಿಸಂಹಿತೆ ಇರುವ ನಿಟ್ಟಿನಲ್ಲಿ ಯಾವುದೇ ಕಾಮಗಾರಿಗೆ ಅನುಮತಿ ಇಲ್ಲದ ಕಾರಣ ನೀತಿಸಂಹಿತೆ ಮುಗಿದ ನಂತರ ಕೂಡ್ಲಿಗಿ ಅಗ್ನಿಶಾಮಕ ಠಾಣೆಯ ಹಳೆಯ ವಾಹನಗಳಿಗೆ ಮುಕ್ತಿ ನೀಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನದಲ್ಲಿ ನೂತನ ವಾಹನಗಳಿಗೆ ಅಸ್ತು ನೀಡುವುದಾಗಿ, ಕಾನಾ ಹೊಸಹಳ್ಳಿಯಲ್ಲಿ  ನೂತನ ಅಗ್ನಿಶಾಮಕ ಠಾಣೆ ನಿರ್ಮಿಸಲು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದು  ಯಾವ್ಯಾವ ಅನುದಾನ ಬಳಕೆ ಮಾಡಬೇಕು ಎಂದು ಸರ್ಕಾರದ ಸಂಬಂದಿಸಿದ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಬಣವಿಕಲ್ಲು ಅಥವಾ ಎಂ ಬಿ ಅಯ್ಯನಹಳ್ಳಿಯಲ್ಲಿ ಡ್ರಾಮಾ ಕೇರ್ ಸೆಂಟರ್ : ಕೂಡ್ಲಿಗಿ ತಾಲೂಕಿನ 50ಕಿಲೋಮೀಟರ್ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುವ ನಿಟ್ಟಿನಲ್ಲಿ ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಲು ಅನುಕೂಲವಾಗುವ ದೃಷ್ಟಿಯಲ್ಲಿ ಬಣವಿಕಲ್ಲು ಅಥವಾ ಎಂ ಬಿ ಅಯ್ಯನಹಳ್ಳಿ ಸಮೀಪ ಡ್ರಾಮಾ ಕೇರ್ ಸೆಂಟರ್ ತೆರೆಯುವ ಬಗ್ಗೆ ಯೋಚನೆ ಇದ್ದು ಚುನಾವಣಾ ನೀತಿಸಂಹಿತೆ ಮುಗಿದ ತಕ್ಷಣ ಇದಕ್ಕೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದ್ದಾರೆ.