ಸಿಬಲ್ ಗೆ ಇಸ್ಮಾಯಿಲ್ ಅಭಿನಂದನೆ
ಬೆಂಗಳೂರು, ಮೇ.೧೭-ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್ ಬಾರ್ ಅಸೋಶಿಯೇಷನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ವೇಳೆ ಕರ್ನಾಟಕ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಜಬಿವುಲ್ಲಾ ಅಭಿನಂದಿಸಿದರು.
ಅಸೋಶಿಯೇಷನ್‌ಗೆ ನಿನ್ನೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಕಪಿಲ್ ಸಿಬಲ್
ಅವರು ೧,೦೦೦ ಮತಗಳನ್ನು ಪಡೆದರೆ, ಅವರ
ಪ್ರತಿಸ್ಪರ್ಧಿ ಪ್ರದೀಪ್ ಕುಮಾರ್ ರಾಯ್ ಅವರು ೬೫೦ ಮತಗಳನ್ನು ಪಡೆದು ಸೋಲು ಕಂಡರು.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಜಬಿವುಲ್ಲಾ, ನಾಲ್ಕನೇ ಬಾರಿಗೆ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅವರು ಈ ಹಿಂದೆ ಮೂರು ಬಾರಿ, ೧೯೯೫-೯೬ ಮತ್ತು ೧೯೯೭-೯೮ ಮತ್ತು ೨೦೦೧ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ೨೦೦೧ರ ಬಳಿಕ ೨೩ ವರ್ಷಗಳ
ಬಳಿಕ ಮತ್ತೆ ಕಪಿಲ್ ಸಿಬಲ್ ಗೆ ಅಧ್ಯಕ್ಷ ಸ್ಥಾನ ಒಲಿದಿದೆ ಎಂದರು.
ಹಾರ್ವರ್ಡ್ ಲಾ ಸ್ಕೂಲ್‌ನ ಪದವೀಧರರಾಗಿರುವ ಸಿಬಲ್ ಅವರು, ೧೯೮೩ರಿಂದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಅವರು ಉಲ್ಲೇಖಿಸಿದರು.