ಪೌರ ಕಾರ್ಮಿಕರಿಗೆ ಸನ್ಮಾನ
ಹುಬ್ಬಳ್ಳಿ,ಸೆ.23:ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರು ಪೌರ ಕಾರ್ಮಿಕರರನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದ್ದು,ಪೌರ ಕಾರ್ಮಿಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯಕ್ಕೆ ಗಮನ ಹರಿಸುವ ಜೊತೆಗೆ ನಗರದ ಆರೋಗ್ಯ ಕಾಪಾಡಲು ಒತ್ತು ನೀಡಬೇಕು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ವಚ್ಛ ಭಾರತ ಅಭಿಯಾನದ ಮೂಲಕ ಬಹುದೊಡ್ಡ ಬದಲಾವಣೆಯನ್ನು ತಂದಿದ್ದಾರೆ . ನಾವೆಲ್ಲರೂ ಮೋದಿ ಅವರು ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸ್ವಚ್ಛ ಹುಬ್ಬಳ್ಳಿ- ಸ್ವಾಸ್ಥ್ಯ ಹುಬ್ಬಳ್ಳಿಯನ್ನು ನಿರ್ಮಾಣ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಡಾ. ಹಿರೇಗೌಡರ,ಬಿರವಳ್ಳಿ, ಕುರಣಗಿ, ವಿಶ್ವನಾಥ ಅಂಗಡಿ, ದೋತ್ರದ,ಪ್ರಮುಖರಾದ ಚೇತನ ಭಾರದ್ವಾಡ,ಪ್ರವೀಣ ಪವಾರ, ವಿಜಯ ಬಾಕಳೆ, ಸಾಯಿನಾಥ ಧಲಬಂಜನ ಹಾಗೂ ಇತರರು ಉಪಸ್ಥಿತರಿದ್ದರು.