ಕಾರ್ಮಿಕರು ಸರ್ಕಾರದ ಸೌಲಭ್ಯ ಸದುಪಯೋಗಕ್ಕೆ ಕರೆ
ಶಿಡ್ಲಘಟ್ಟ.ಮೇ,೧೭:ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಮೂಲ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ಹೇಳಿದರು.
ನಗರದ ಶಾರದಾ ಶಾಲೆ ಮುಂಭಾಗ ಬಣ್ಣ(ಪೈಂಟ್) ಕಾರ್ಮಿಕರ ಸಂಘದ ಕಚೇರಿಯಲ್ಲಿ ಗುರುವಾರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಕಾರ್ಮಿಕ ಇಲಾಖೆಯಿಂದ ನೋಂದಣಿಯಾಗಿರುವ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಮೂಲ ಸೌಲಭ್ಯಗಳನ್ನು ನೀಡುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾನೂನು ಸೇವಾ ಸಮಿತಿ ವಕೀಲರ ಸಂಘ ಇತರೆ ಇಲಾಖೆ ಸಹಕಾರದೊಂದಿಗೆ ತಾಲೂಕಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಮಿಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಸಹಸ್ರಾರು ಜನ ನಕಲಿ ಕಾರ್ಮಿಕ ಕಾರ್ಡ್ ಪಡೆದು ಬಡ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂತಹ ಅನರ್ಹರು ಪಡೆದಿರುವ ಗುರುತಿನ ಚೀಟಿ ನೋಂದಣಿಯನ್ನು ರದ್ದುಪಡಿಸುವುದು ಮಾತ್ರವಲ್ಲ, ಅಂಥಹವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳುತ್ತೇವೆ, ಆದ್ದರಿಂದ ಅಂತಹವರು ಏನಾದರೂ ನಿಮ್ಮಗೆ ಗೊತ್ತಿದ್ದರೆ ನಕಲಿ ಕಾರ್ಡನ್ನು ಕಾರ್ಮಿಕ ಕಚೇರಿಗೆ ಹಿಂತಿರುಗಿಸಲು ತಿಳಿಸಿ ಇಲ್ಲವಾದಲ್ಲಿ ನಮಗೆ ಮಾಹಿತಿ ನೀಡಿ ಎಂದರು.
ಬಣ್ಣ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಲೆ ಇದ್ದಾರೆ ಅಂತಹವರಿಗೂ ಸರ್ಕಾರ ಸೂಕ್ತ ಸ್ಥಾನ ಮಾನ ನೀಡಿ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದರು.
ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ನವೀನ್, ಸಂಘದ ಗೌರವ ಅಧ್ಯಕ್ಷ ಎ.ಮುನಿರಾಜು,ಎ.ನಟರಾಜು,ಪಿ. ಬಾಬು, ನಾರಾಯಣಸ್ವಾಮಿ, ಜಿ.ಎಮ್,ನಾರಾಯಣಸ್ವಾಮಿ, ಕೆ.ಎಮ್.ಬಾಬು, ಕೆ, ಟಿ.ಎಂ.ಸುಬ್ರಮಣಿ, ಸ್ವಾತಿ ಸೇರಿದಂತೆ ಬಣ್ಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.