ಧೈರ್ಯವಾಗಿ ಹಿಂಜರಿಕೆಯಿಲ್ಲದೆ ದೂರು ಸಲ್ಲಿಸಲು: ಎಸ್ಪಿ ಪವನ್ ನಿಜ್ಜೂರ್
ವಿಜಯಪುರ.ಮೇ.೧೭- ಸರ್ಕಾರಿ ಹಾಗೂ ಸಾರ್ವಜನಿಕರ ಕಚೇರಿಗಳಲ್ಲಿ ಕೆಲಸ ಕಾರ್ಯ ಮಾಡಿಕೊಡದೆ ಸತಾಯಿಸುವುದು ಲಂಚಕ್ಕೆ ಬೇಡಿಕೆ ಇಡುವುದು ಮುಂತಾಗಿ ತೊಂದರೆ ಅನುಭವಿಸುತ್ತಿರುವ ನೊಂದ ಸಾರ್ವಜನಿಕರು ಲೋಕಾಯುಕ್ತಕ್ಕೆ ಧೈರ್ಯವಾಗಿ ಯಾವುದೇ ಹಿಂಜರಿಕೆ ಇಲ್ಲದೆ ದೂರುಗಳನ್ನು ಸಲ್ಲಿಸಬಹುದೆಂದು, ದೂರು ನೀಡುವುದರಿಂದ ತಮ್ಮ ಕೆಲಸಗಳು ಆಗದೆ ಮಧ್ಯಂತರದಲ್ಲಿ ನಿಂತು ಹೋಗುತ್ತದೆ ಎಂಬ ಹಿಂಜರಿಕೆ ಬೇಕಾಗಿಲ್ಲವೆಂದು, ದೂರಿಗೆ ಸಂಬಂಧಪಟ್ಟಂತೆ ನೊಂದವರ ಅರ್ಜಿದಾರರ ಕೆಲಸ ಸಂಪೂರ್ಣ ವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಎಸ್ ಪಿ ಪವನ್ ನಿಜ್ಜೂರ್ ತಿಳಿಸಿದರು.
ಇಲ್ಲಿನ ಪರಿವೀಕ್ಷಣ ಮಂದಿರದಲ್ಲಿ ಲೋಕಾಯುಕ್ತ ವತಿಯಿಂದ ಏರ್ಪಡಿಸಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಸಮಸ್ಯೆಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಸಾರ್ವಜನಿಕರಿಂದ ೧೯ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಬಹುತೇಕ ಅರ್ಜಿಗಳು ಪುರಸಭೆಯ ನೌಕರರುಗಳ ಹಾಗೂ ಕಂದಾಯ ಇಲಾಖೆಗಳ ಮೇಲಿದ್ದು, ಖಾತೆಗಳನ್ನು ಮಾಡಿಕೊಡದಿರುವುದು, ರಾಜಕಾಲುವೆಗಳ ಒತ್ತುವರಿ, ನಕಾಶೆ ರಸ್ತೆಗಳ ಒತ್ತುವರಿ, ಮುಂತಾದವುಗಳೊಂದಿಗೆ ತಾಲೂಕಿನ ಕೊಯಿರಾ ಬಂಡೆ ಬಳಿ ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿರುವುದು, ಶಿಥಿಲವಾದ ವಿದ್ಯುತ್ ಕಂಬ ತೆರವುಗೊಳಿಸದಿರುವುದು ಮುಂತಾಗಿ ದೂರುಗಳು ದಾಖಲಾಗಿವೆ ಎಂದು ಡಿಎಸ್ಪಿ ಗಿರೀಶ್ ಪಿ.ರೋಡಕರ್ ರವರು ತಿಳಿಸಿದರು.
ಇನ್ಸ್ಪೆಕ್ಟರ್ ನಂದಕುಮಾರ್ ರವರು ಮಾತನಾಡಿ, ಅರ್ಜಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲೇ ಕರೆಸಿ ಸೂಚನೆಗಳನ್ನು ನೀಡುವುದರೊಂದಿಗೆ, ಪುರಸಭೆಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಪಿ ವಿ ವೆಂಕಟೇಶ್, ಹೆಡ್ ಕಾನ್‌ಸ್ಟೇಬಲ್ಗಳಾದ ಶ್ರೀಧರ್, ವೆಂಕಟರೆಡ್ಡಿ, ಬೈರೇಶ್, ಕಾನ್‌ಸ್ಟೇಬಲ್ಗಳಾದ ದೇವರಾಜ್, ಪ್ರಕಾಶ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.