ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಡಾ. ಎಸ್.ಎನ್. ಇಂದ್ರೇಶ್‍
ಸಂಜೆವಾಣಿ ನ್ಯೂಸ್
ಮಂಡ್ಯ .ಮೇ.17:- ಪದೇ ಪದೇ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಂಡುಬಂದಿದೆ. ರಾಜ್ಯ ಸರ್ಕಾರ ಜನರನ್ನು ಭಯದ ವಾತಾವರಣದಲ್ಲಿ ಬದುವ ಧಾರುಣ ಸ್ಥಿತಿಗೆ ತಲುಪಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎಸ್.ಎನ್. ಇಂದ್ರೇಶ್ ಆರೋಪಿಸಿದರು.
ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯನ್ನು ಹೇಗೆ ಹತೋಟಿಗೆ ತರಬೇಕು ಎಂಬ ಸಾಮಥ್ರ್ಯವೇ ಇಲ್ಲದ ಗೃಹ ಸಚಿವರು ಇದ್ದಾರೆ. ಪರಿಸ್ಥಿತಿಯನ್ನು ಅವಲೋಕನ ಮಾಡಲೂ ಅಸಮರ್ಥರಾಗಿರುವ ರಾಜ್ಯ ಸರ್ಕಾರ ಇರುವ ಕಾರಣಕ್ಕೋಸ್ಕರ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಂಡುಬಂದಿದೆ ಎಂದು ದೂರಿದರು.
ಪ್ರತಿಯೊಂದರಲ್ಲೂ ರಾಜಕೀಯ ಲಾಭದ ಹುನ್ನಾರ, ಮತಬ್ಯಾಂಕ್ ಸಂರಕ್ಷಣೆಯ ಕಾರಣಕ್ಕೆ ಹಿಂದೆ ಕಾನೂನು ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ರಾಜ್ಯ ಇಂದು ಗೂಂಡಾ ರಾಜ್ಯವಾಗಿ ಮತ್ತು ಕೊಲೆಗಡುಕರ ರಾಜ್ಯವಾಗಿ ಪರಿವರ್ತನೆಯಾಗಿದೆ ಎಂದು ಕಿಡಿಕಾರಿದರು.
ಸಿಟಿ ಕ್ರೈಮ್ ಮತ್ತು ರಾಷ್ಟ್ರೀಯ ಕ್ರೈ ಬ್ಯೂರೋ ಪ್ರಕಾರ 11 ತಿಂಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಕ್ರಿಮಿನಲ್ ಚಟುವಟಿಕೆ ಹೆಚ್ಚಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ಅಮಾನುಷ ಕೃತ್ಯಗಳು ಹೆಚ್ಚಾಗಿವೆ ಎಂದು ದೂರಿದರು.
ಹುಬ್ಬಳ್ಳಿಯ ಅಂಜಲಿಯ ಹತ್ಯಾ ಪ್ರಕರಣ, ಅದಕ್ಕೂ ಮೊದಲು ನೇಹಾ ಪ್ರಕರಣ, ಬೆಳಗಾವಿಯಲ್ಲಿ ನಡೆದ ದಲಿತ ಮಹಿಳೆಯ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ, ರೊಟ್ಟಿ ಕೆಳಿದ ದಲಿತ ಯುವಕನ ಹತ್ಯೆ, ಮತ್ತೊಂದೆಡೆ ಮತಾಂಧ ಶಕ್ತಿಗಳು ಸ್ವಚ್ಚಂದವಾಗಿ ವಿಜೃಂಭಿಸುತ್ತಿದ್ದರೆ ಇನ್ನೊಂದು ಕಡೆ ಕೊಲೆಗಡುಕರು, ಗುಂಡಾ ರಾಜ್ಯವಾಗಿ ಕರ್ನಾಟವನ್ನು ಪರಿವರ್ತನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೈಯ್ಯಲ್ಲಿ ರಾಜ್ಯಸುರಕ್ಷಿತವಾಗಿಲ್ಲ. ಅಪಾಯಕಾರಿ ಸ್ಥಿತಿಯಲ್ಲಿದೆ ಎಂಬುದನ್ನು ಇದಕ್ಕಿಂತಲೂ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಈ ಸಂಬಂಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಒಬ್ಬ ಅಸಮರ್ಥ ರಾಜ್ಯದ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.