ದೇಶದ ಅಭಿವೃದ್ದಿಯಲ್ಲಿ ರಾಜೀವ್‍ಗಾಂಧಿ ಕೊಡುಗೆ ಅಪಾರ: ಪುಟ್ಟರಂಗಶೆಟ್ಟಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ 17- ರಾಜೀವ್‍ಗಾಂಧಿ ಅವರು ಕೊಡುಗೆ ಬಹಳಷ್ಟಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ, ಬಣ್ಣಿಸಿದರು.
ಅವರು ಬೆಂಗಳೂರಿನಿಂದ ರಾಜೀವ್‍ಗಾಂಧಿ ಅವರ ಹತ್ಯೆಯಾದ ಸ್ಥಳ ಶ್ರೀ ಪೆರಂಬದೂರಿಗೆ ತೆರಳುವ 33ನೇ ವರ್ಷದ ರಾಜೀವ್‍ಗಾಂಧಿ ಜ್ಯೋತಿ ಯಾತ್ರೆಯು ಚಾ.ನಗರಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿರವರ ಜೊತೆಗೂಡಿ ರಾಜೀವ್‍ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಸ್ವಾಗತ ಕೋರಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನದ ಅಭಿವೃದ್ದಿ ಹಾಗು ಯುವಕರಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ ಯುವ ಜನತೆಯನ್ನು ರಾಜಕೀಯ ಕ್ಷೇತ್ರಕ್ಕೆ ಹೆಚ್ಚು ಸಕ್ರಿಯವಾಗುವಂತೆ ಮಾಡಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಿ, ಸ್ಥಳೀಯರ ಕೈಗೆ ಆಡಳಿತವನ್ನು ನೀಡಿದ ಕೀರ್ತಿ ರಾಜೀವ್‍ಗಾಂಧಿ ಅವರಿಗೆ ಸಲ್ಲುತ್ತದೆ. ಅವರು 33 ವರ್ಷಗಳ ಹಿಂದೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಭಯೋತ್ಪಾದಕರ ಕೃತ್ಯಕ್ಕೆ ಬಲಿಯಾಗಿದ್ದು ದುರಂತ. ನೆಹರು ಕುಟುಂಬ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದೆ ಎಂದು ಪುಟ್ಟರಂಗಶೆಟ್ಟಿ ಸ್ಮರಿಸಿದರು.
ನಮ್ಮ ನಾಯಕರಾದ ಮಾಜಿ ಪ್ರಧಾನಿ ದಿ. ರಾಜೀವ್‍ಗಾಂಧಿ ಅವರ 33ನೇ ವರ್ಷದ ಜ್ಯೋತಿ ಯಾತ್ರೆ ಇಂದು ಚಾ.ನಗರಕ್ಕೆ ಆಗಮಿಸುತ್ತಿದ್ದು, ಪ್ರತಿ ವರ್ಷವು ಸಹ ಬೆಂಗಳೂರು ಮಾರ್ಗವಾಗಿ ಚಾ.ನಗರಕ್ಕೆ ಜ್ಯೋತಿ ಯಾತ್ರೆ ಆಗಮಿಸುತ್ತಿದೆ. ಈ ಸಂದರ್ಭಲ್ಲಿ ರಾಜೀವ್‍ಗಾಂಧಿ ಅವರ ಜ್ಯೋತಿ ಯಾತ್ರೆಯನ್ನು ಸ್ವೀಕರಿಸಿ, ಸ್ವಾಗತ ಕೋರುವ ಜೊತೆಗೆ ಗೌರವಯುತವಾಗಿ ಜ್ಯೋತಿಯನ್ನು ತಮಿಳುನಾಡಿಗೆ ಬೀಳ್ಕೋಡುವ ಕಾರ್ಯವನ್ನು ನಿರಂತರವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನಿಂದ ನಿನ್ನೆ ಕೆಪಿಸಿಸಿ ಕಚೇರಿಯಿಂದ ಹೊರಟ ರಾಜೀವ್‍ಗಾಂಧಿ ಯಾತ್ರೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖಂಡರು ಚಾಲನೆ ನೀಡಿದ್ದರು. ಇಂದು ಚಾ.ನಗರಕ್ಕೆ ಆಗಮಿಸುತ್ತಿದ್ದಂತೆ ಶ್ರೀ ಚಾಮರಾಜೇಶ್ವರ ಉದ್ಯಾನವನ ಮುಂಭಾಗ ರಾಜೀವ್ ಜ್ಯೋತಿಯನ್ನು ಸ್ವೀಕರಿಸಿ, ಮೆರವಣಿಗೆಯ ಮೂಲಕ ಡಿವಿಯೇಷನ್ ರಸ್ತೆಯ ಮಾರ್ಗ ವಾಗಿ ಸತ್ಯಮಂಗಲಂಗೆ ಬೀಳ್ಕೊಡಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ರಾಜೀವ್‍ಗಾಂಧಿ ಅವರ ಜ್ಯೋತಿ ಯಾತ್ರೆಯನ್ನು ಸ್ವಾಗತಿಸುವುದೇ ಒಂದು ಪುಣ್ಯದ ಕೆಲಸವಾಗಿದೆ. ಕಳೆದ 33 ವರ್ಷಗಳಿಂದ ನಿರಂತರವಾಗಿ ರಾಜೀವ್‍ಗಾಂಧಿ ಜ್ಯೋತಿ ಯಾತ್ರೆಯು ಚಾ.ನಗರ ಮಾರ್ಗವಾಗಿ ಸಂಚರಿಸುತ್ತಿದ್ದು, ಮೇ 21 ರಂದು ಅವರು ಅವರ ಹತ್ಯೆಯಾದ ಸ್ಥಳದಲ್ಲಿ ಶಾಂತಿಯನ್ನು ಬೋದಿಸುವ ಜೊತೆಗೆ ರಾಜೀವ್‍ಗಾಂಧಿ ಅವರ ಸ್ಮರಣೆ ಮಾಡಲಾಗುತ್ತದೆ. ರಾಜೀವ್‍ಗಾಂಧಿ ಅವರು ನಮ್ಮೆಲ್ಲರಿಗೂ ಅದರ್ಶವಾಗಿದ್ದರು, ಬಹಳ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರು ಎಂದರು.
ಜ್ಯೋತಿ ಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಬಿ.ಕೆ. ರವಿಕುಮಾರ್, ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್, ಮುಖಂಡರಾದ ರವಿಗೌಡ, ಗ್ರಾ.ಪಂ.ಅಧ್ಯಕ್ಷ ಪಿ.ಶೇಖರ್, ಕಾಡಹಳ್ಳಿ ರೂಪೇಶ್, ಕುಮಾರ್, ಕರಿನಂಜನಪುರ ಸ್ವಾಮಿ, ಮರಿಯಾಲ ಮನು, ಎಚ್.ಎನ್ ಖಾನ್, ಪದ್ಮಪುರುಷೋತ್ತಮ್, ಮಹೇಶ್, ವಿನೋದ್, ರಾಜೀವ್ ಗಾಂಧಿ ಜ್ಯೋತಿ ಯಾತ್ರೆಯ ಛೇರ್ಮನ್ ದೊರೆ, ಉಪಾಧ್ಯಕ ಮಾಣಿಕ್ಯ ರೆಡ್ಡಿ, ಸಹ ಕಾರ್ಯದರ್ಶಿ ಶ್ರೀನಿವಾಸಿ, ಅಯ್ಯರ್, ಗೀತಾ, ಸುಶೀಲ ಮೊದಲಾದವರು ಇದ್ದರು.