ಸಚಿವ ಡಾ. ಪರಮೇಶ್ವರ್, ಖರ್ಗೆ ರಾಜೀನಾಮೆಗೆ ಆಗ್ರಹ ಹುಬ್ಬಳ್ಳಿಯ ಅಂಜಲಿ ಹತ್ಯೆ ಖಂಡಿಸಿ ಮೇ 22ರಂದು ಕೋಲಿ ಕಬ್ಬಲಿಗರ ಬೃಹತ್ ಪ್ರತಿಭಟನೆ
ಕಲಬುರಗಿ:ಮೇ.16: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗರ ಬರ್ಬರ ಹತ್ಯೆಯನ್ನು ಖಂಡಿಸಿ ಮೇ 22ರಂದು ಬೆಳಿಗ್ಗೆ 10-30ಕ್ಕೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿಯೇ ಈ ಹಿಂದೆ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿಯ ಬರ್ಭರ ಹತ್ಯೆ ಸಂಭವಿಸಿತ್ತು. ಆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿದ್ದಲ್ಲಿ ಅಂಜಲಿ ಅಂಬಿಗರ ಯುವತಿಯ ಹತ್ಯೆ ಆಗುತ್ತಿರಲಿಲ್ಲ. ಇದರ ನೈತಿಕ ಹೊಣೆ ಹೊತ್ತು ರಾಜ್ಯದ ಅಸಮರ್ಥ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಅಂಜಲಿ ಅಂಬಿಗರ ಕುಟುಂಬವು ಬಡತನದಲ್ಲಿ ಬಳಲುತ್ತಿದೆ. ತಂದೆ, ತಾಯಿ ಇಲ್ಲ. ಅಜ್ಜಿ ಹಾಗೂ ಮೂವರು ಸಹೋದರಿಯರು ಇದ್ದು, ಅಂಜಲಿಯೇ ಮನೆಯ ನಿರ್ವಹಣೆಯನ್ನು ಮಾಡುತ್ತಿದ್ದರು. ಈಗ ಆಕೆಯನ್ನೂ ಸಹ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೀಗಾಗಿ ಮನೆಗೆ ಯಾರೂ ದಿಕ್ಕು ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಕ್ಕೆ ಒಂದು ಕೋಟಿ ರೂ.ಗಳ ಪರಿಹಾರ ಮತ್ತು ಹಿರಿಯ ಸಹೋದರಿಗೆ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಜಿಲ್ಲೆಯಲ್ಲಿ ನಗರದ ಹಾಗರಗಾ ಕ್ರಾಸ್‍ನ ಮನೆಯಲ್ಲಿ ಅರ್ಜುನಪ್ಪ ಎಂಬುವವರಿಗೆ ಕೂಡಿಹಾಕಿ ಬೆತ್ತಲೆ ಮಾಡಿ ಹಣಕ್ಕಾಗಿ ಚಿತ್ರಹಿಂಸೆ ಕೊಟ್ಟ ಅಮಾನವೀಯ ಘಟನೆ ಸಂಭವಿಸಿದೆ. ಆದ್ದರಿಂದ ಸಚಿವರಾದವರು ತಮ್ಮ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸಲು ಆಗದೇ ಇದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಹಿರಿಯ ಹಾಗೂ ಅನುಭವಿ ಇದ್ದವರಿಗೆ ಸಚಿವರನ್ನಾಗಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿಯೂ ಸಹ ಕೊಲೆ, ಅಕ್ರಮ ಮರಳು, ಬಡ್ಡಿ ವ್ಯಾಪಾರದಂತಹ ದಂಧೆಗಳನ್ನು ತಡೆಯುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ವಿಫಲವಾಗಿದ್ದಾರೆ. ಹಾಗಾಗಿ ಅವರೂ ಸಹ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮರಳುಗಾರಿಕೆ, ಬಡ್ಡಿ ವ್ಯವಹಾರ, ಕೊಲೆಗಳು ಆಗುತ್ತಿವೆ. ಹಪ್ತಾ ವಸೂಲಿ ಆಗುತ್ತಿವೆ. ಇದರಿಂದ ಪೋಲಿಸರಿಗೆ ಯಾರೂ ಹೆದರುತ್ತಿಲ್ಲ. ಜಿಲ್ಲೆಯಲ್ಲಿನ ಲಾಡಮುಗುಳಿ, ಮಣ್ಣೂರ್, ಸಂಗಾಪುರ, ಗಂಗಂಪಳ್ಳಿ ಹಾಗೂ ಸಾವಳಗಿಯಲ್ಲೂ ಇಂತಹ ಘಟನೆಗಳು ಸಂಭವಿಸಿವೆ. ಕಾನೂನು, ಸಂವಿಧಾನ, ಬುದ್ಧ, ಬಸವ ಅಂಬೇಡ್ಕರ್ ಅವರ ಹೆಸರಿನಲ್ಲಿ ಆಡಳಿತ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಾರೆ. ಇಡೀ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆದ್ದರಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಕೋಲಿ ಸಮಾಜದ ಮೇಲೆ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿವೆ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೋಲಿ ಸಮಾಜ ಖರ್ಗೆಯವರ ಕಾಲಿಗೆ ಬೀಳಬೇಕು ಎನ್ನುವ ರೀತಿಯಲ್ಲಿ ಸಮಾವೇಶ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ಯುವಕರು ಚಿಂಚನಸೂರ್ ಅವರಿಗೆ ಬುದ್ದಿ ಕಲಿಸಬೇಕು ಎಂದು ಅವರು ಕರೆ ನೀಡಿದರು.
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಕುರಿತು ಯಾರಿಗೂ ಕಾಳಜಿ ಇಲ್ಲ. ಚುನಾವಣೆ ಬಂದಾಗ ಮಾತ್ರ ನೆನಪು ಮಾಡುತ್ತಾರೆ. ನೇಹಾ ಹಿರೇಮಠ್ ಅವರ ಹತ್ಯೆಯಾದಾಗ ಅವರ ಮನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಅದೇ ರೀತಿ ಅಂಜಲಿ ಅಂಬಿಗರ ಅವರ ಮನೆಗೂ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಭೇಟಿ ನೀಡಿ ಸೂಕ್ತ ಪರಿಹಾರ ದೊರಕಿಸಬೇಕು ಎಂದು ಅವರು ಒತ್ತಾಯಿಸಿದರು.
ನಮ್ಮ ಸಮಾಜಕ್ಕೆ ಆಗಿದೆ, ನಿಮ್ಮ ಸಮಾಜಕ್ಕೆ ಆಗಿದೆ ಎಂದು ಯಾವುದೇ ಸಮಾಜದವರು ಸುಮ್ಮನೇ ಕುಳಿತುಕೊಳ್ಳಬಾರದು. ಯಾವುದೇ ಸಮಾಜಕ್ಕೆ ಅನ್ಯಾಯ ಆದರೂ ಸಹ ಅನ್ಯಾಯದ ವಿರುದ್ಧ ಎಲ್ಲ ಸಮಾಜದವರು ಒಟ್ಟಾಗಿ ಹೋರಾಡಬೇಕು. ಅಂದಾಗ ಮಾತ್ರ ಅನ್ಯಾಯವನ್ನು ತಡೆಯಲು ಸಾಧ್ಯವಾಗಲಿದೆ. ಹಾಗಾಗಿ ಮೇ 22ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಎಲ್ಲ ಸಮಾಜದವರು ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾಧರ್ ಕೆ. ಮಂಗಳೂರೆ, ಚಂದ್ರಕಾಂತ್ ಕಿರಸಾವಳಗಿ, ಬಸವರಾಜ್ ಸಪ್ಪಣಗೋಳ್, ಪ್ರವೀಣ್ ಜಮಾದಾರ್, ಬೆಳ್ಳಪ್ಪಾ ಇಂಗನಕಲ್, ಪ್ರೇಮ್ ಕೋಲಿ ಮುಂತಾದವರು ಉಪಸ್ಥಿತರಿದ್ದರು.