ನಾಳೆಯಿಂದ ಶಿವಯೋಗಿಗಳ ವಚನ ದರ್ಶನ ಪ್ರವಚನ ಆರಂಭ
ಜೇವರ್ಗಿ:ಮೇ.16: 17ನೇ ಶತಮಾನದ ಶ್ರೇಷ್ಠ ವಚನಕಾರ, ಅಖಂಡ ಜ್ಞಾನಿ ಚರಚಕ್ರವರ್ತಿ ಶ್ರೀ ಷಣ್ಮುಖ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ದಿ.17 ರಿಂದ ದಿ.27 ರವರೆಗೆ ಷಣ್ಮುಖ ಶಿವಯೋಗಿಗಳ ವಚನ ದರ್ಶನ ಪ್ರವಚನ ನಡೆಯಲಿದೆ ಎಂದು ಶ್ರೀ ಷಣ್ಮುಖ ಶಿವಯೋಗಿಗಳ ವಿರಕ್ತ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಸೀರಿ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದ ನಿಮಿತ್ತ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೇ. 17ರಿಂದ 27ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡದ ಶ್ರೀ ಬಸವೇಶ್ವರಿ ತಾಯಿ ಅವರಿಂದ ಪ್ರತಿದಿನ ಸಂಜೆ 7 ಗಂಟೆಯಿಂದ 8 ಗಂಟೆ ವರೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಕಲಬುರ್ಗಿಯ ಸಧ್ಗುರು ಕಲಾ ಬಳಗದ ಶ್ರೀಮತಿ ವಿಜಯಲಕ್ಷ್ಮೀ ಎಸ್ ಕೆಂಗನಾಳ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಮೇ. 27ರಂದು ಲಘು (ಉಚ್ಚಾಯಿ) ರಥೋತ್ಸವ ನಡೆಯಲಿದ್ದು, ಮೇ.28 ರಂದು ಸಂಜೆ 6 ಗಂಟೆಗೆ ಸಹಸ್ರಾರು ಭಕ್ತಾಧಿಗಳ ಜಯಘೋಷದ ಮದ್ಯೆ ಅದ್ದೂರಿ ರಥೋತ್ಸವ ಜರುಗಲಿದೆ. ಮೇ 28ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಷಣ್ಮುಖ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಚನಾಭಿಷೇಕ, ಮಹಾ ಮಂಗಳಾರತಿ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ವಚನ ಗ್ರಂಥದ ಪಲ್ಲಕ್ಕಿ ಉತ್ಸವ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮದ್ಯಾಹ್ನ ಷಣ್ಮುಖ ಶಿವಯೋಗಿಗಳ ಶ್ರೀಮಠಕ್ಕೆ ಬಂದು ತಲುಪಲಿದೆ. ಸಂಜೆ 5ಗಂಟೆಗೆ ಪುರವಂತರ ಸೇವೆ ಜರುಗಲಿದ್ದು, ಸಂಜೆ 6:30ಗಂಟೆಗೆ ಭವ್ಯ ರಥೋತ್ಸವ ನಡೆಯಲಿದೆ. ಜಾತ್ರೆಗೆ ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರವಚನ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ಕಮಿಟಿ ಅದ್ಯಕ್ಷ ರಾಜಶೇಖರ ಸೀರಿ ಮನವಿ ಮಾಡಿದ್ದಾರೆ.