ಸರ್ಕಾರದಿಂದ ಬೆಳೆ ಪರಿಹಾರ ಬಿಡುಗಡೆ, 11597 ರೈತರ ಖಾತೆಗಳು ವ್ಯತ್ಯಾಸ

ಸಂಜೆವಾಣಿ ವಾರ್ತೆ
ದಾವಣಗೆರೆ,ಮೇ.16; ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವಾಗಿ ಎರಡನೇ ಕಂತಿನಲ್ಲಿ ಜಿಲ್ಲೆಯ 69575 ರೈತರಿಗೆ ರೂ.44.35 ಕೋಟಿ ಇನ್‍ಫುಟ್ ಸಬ್ಸಿಡಿ ಬಿಡುಗಡೆ ಮಾಡಿದ್ದು ದಾಖಲಾತಿ ಹೊಂದಾಣಿಕೆಯಾಗದ 11597 ರೈತರಿಗೆ ಪರಿಹಾರ ಬಿಡುಗಡೆ ಮಾಡಲು ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ಸರಿಪಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
 ಅವರು  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬ್ಯಾಂಕರ್ಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊದಲ ಕಂತಿನಲ್ಲಿ ತಲಾ 2 ಸಾವಿರದಂತೆ 82928 ರೈತರಿಗೆ ಹಾಗೂ ಎರಡನೇ ಹಂತದಲ್ಲಿ 69575 ರೈತರಿಗೆ ಒಟ್ಟು ರೂ.60.23 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ 11597 ರೈತರಿಗೆ ಇನ್‍ಫುಟ್ ಸಬ್ಸಿಡಿ ಬಿಡುಗಡೆ ಮಾಡಬೇಕಾಗಿದ್ದು ಇವರ ಖಾತೆಯ ವಿವರಗಳು ಸರಿಯಾಗಿರದ ಕಾರಣ ಬಿಡುಗಡೆ ಮಾಡಲು ಸಾಧ್ಯವಾಗಿರುವುದಿಲ್ಲ. ಇದರಲ್ಲಿ 5575 ರೈತರ ಖಾತೆಗಳಿಗೆ ಆಧಾರ್ ಜೋಡಣೆಯಾಗಿರುವುದಿಲ್ಲ. ಐಎಫ್‍ಎಸ್‍ಸಿ ಕೋಡ್ ತಪ್ಪಾಗಿರುವ 3696, ಫ್ರೋಟ್ಸ್ ಮತ್ತು ಆಧಾರ್‍ಗೆ ಮಿಸ್ ಮ್ಯಾಚ್ ಆಗಿರುವ 1684, ಆಧಾರ್ ಜೋಡಣೆಯಾಗದ 244 ಸೇರಿದಂತೆ ವಿಫಲ ಪಾವತಿ ಸೇರಿದಂತೆ ಇತರೆ ಕಾರಣದಿಂದ ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ.
 ಎಲ್ಲಾ ತಾಲ್ಲೂಕುಗಳಲ್ಲಿ ಪರಿಹಾರದ ಬಗ್ಗೆ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದ್ದ ಇಲ್ಲಿಯವರೆಗೆ 1374 ಕರೆಗಳನ್ನು ಸ್ವೀಕರಿಸಲಾಗಿದೆ. ಬ್ಯಾಂಕ್‍ಗಳಲ್ಲಿ  ಪ್ರತ್ಯೇಕವಾಗಿ ಸಹಾಯ ಮೇಜು ಸ್ಥಾಪನೆ ಮಾಡುವ ಮೂಲಕ ಆಧಾರ್ ಸೀಡಿಂಗ್ ಮಾಡುವುದು ಮತ್ತು ಆಧಾರ್‍ನಂತೆ ಬ್ಯಾಂಕ್ ಖಾತೆಯನ್ನು ತಿದ್ದುಪಡಿ ಮಾಡುವ ಮೂಲಕ ಆದಷ್ಟು ಬೇಗ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಲು ದಾಖಲೆಗಳನ್ನು ಸರಿಪಡಿಸುವ ಕೆಲಸವನ್ನು ಎಲ್ಲಾ ಬ್ಯಾಂಕ್‍ಗಳಿಂದಾಗಬೇಕಾಗಿದೆ ಎಂದರು.