ಗ್ರಾಮೀಣ ಭಾಗದ ರೈತರು ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಬೇಕು
ಅಫಜಲಪುರ: ಮೇ.16:ಸಾಂಪ್ರದಾಯಿಕ ಬೆಳೆಗಳನ್ನು ಹೊರತುಪಡಿಸಿ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ರೈತರು ಹೆಚ್ಚಿನ ಆದ್ಯತೆ ನೀಡಿದರೆ ಆರ್ಥಿಕವಾಗಿ ಮುಂದೆ ಬರಬಹುದು ಎಂಬ ಉದ್ದೇಶದಿಂದ ಪಟ್ಟಣದ ಹೊರವಲಯದಲ್ಲಿರುವ ತಾಲೂಕಾ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅವರ ತೋಟಕ್ಕೆ ಮಹಾರಾಷ್ಟ್ರ ರಾಜ್ಯದ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಆಶೀಷ ಕಾಳೆ ಭೇಟಿ ನೀಡಿ ಮಾತನಾಡಿದರು.
ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಕಿಂಗ್ ಬೆರ್ರಿ ಹಾಗೂ ಕ್ವಿನ್ ಬೆರ್ರಿ ಮಾದರಿ ತಳಿಗಳನ್ನು ಬೆಳೆದ ಲಚ್ಚಪ್ಪ ಜಮಾದಾರ ಅವರ ತೋಟದಲ್ಲಿ ಬೆಳೆ ಪರಿಶೀಲನೆ ನಡೆಸಿದ ಅವರು ಗ್ರಾಮೀಣ ಭಾಗದ ರೈತರು ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಾಗ ನೀರಿನ ಉಳಿತಾಯ ಮತ್ತು ಬೆಳೆ ಇಳುವರಿ ಹೆಚ್ಚುವರಿ ಆಗಲಿದೆ ಎಂದರು.
ಪ್ರಗತಿಪರ ರೈತ ಜೆ.ಎಂ ಕೊರಬು ಅವರು ಮಾತನಾಡಿ, ನಮ್ಮ ರೈತರು ಹೆಚ್ಚಾಗಿ ತಮ್ಮ ಬೆಳೆಗಳಿಗೆ ಸಾವಯವ ಗೊಬ್ಬರಗಳನ್ನು ಬಳಸಬೇಕು ಹಾಗೂ ಆಗಾಗ ಕೃಷಿ ವಿಜ್ಞಾನಿಗಳಿಂದ ಮಣ್ಣಿನ ಫಲವತ್ತತೆ ಪರೀಕ್ಷಿಸಬೇಕು. ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ರೈತರು ಒಂದಷ್ಟು ಶ್ರಮವಹಿಸಿ ಪ್ರಯತ್ನಪಟ್ಟು ಬೆಳೆ ಬೆಳೆದರೆ ಉತ್ತಮ ಆದಾಯ ಗಳಿಸಬಹುದು ಎಂದರು.
ಈ ವೇಳೆ ಗಣೇಶ ಭೋಸಲೆ, ಶಿವಪುತ್ರಪ್ಪ ಜಿಡ್ಡಗಿ, ಸಿದ್ದಪ್ಪ ಸಿನ್ನೂರ, ಮಹಾಂತಪ್ಪ ಬಡಿಗೇರ, ದುಂಡು ಜಮಾದಾರ, ರವಿ ಸೇರಿದಂತೆ ರೈತರು ಹಾಗೂ ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳು ಇದ್ದರು.
ಮುಂಬರುವ ದಿನಗಳಲ್ಲಿ ನಮ್ಮ ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆ ಬೆಳೆಯುವ ರೈತರಿಗೆ ಮಾಹಿತಿ ನೀಡುವ ಸಲುವಾಗಿ ಸಂಪನ್ಮೂಲ ವ್ಯಕ್ತಿಗಳನ್ನು ತಾಲೂಕಿಗೆ ಕರೆಸಿ ವಿಶೇಷ ರೈತರ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು.
ಲಚ್ಚಪ್ಪ ಜಮಾದಾರ, ಪ್ರಗತಿಪರ ರೈತ ಅಫಜಲಪುರ