ಕೊಟ್ಟೂರು ಬಸ್ ನಿಲ್ದಾಣವೋ… ಕೆರೆಯೋ!
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.16: ನಿನ್ನೆ ಗಾಳಿ ಸಹಿತ ಭಾರಿ ಸುರಿದ ಮಳೆಯಿಂದಾಗಿ ಕೊಟ್ಟೂರು ಬಸ್ ನಿಲ್ದಾಣದ ತುಂಬಾ ಚರಂಡಿ ನೀರು ನುಗ್ಗಿ ಕೆಲ ಕಾಲ ಕೆರೆಯಾಗಿ ನಿರ್ಮಾಣಗೊಂಡಿತ್ತು.
ಇದರಿಂದ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಸುಮಾರು ಒಂದು ಗಂಟೆಗಳ ಕಾಲ ಭಾರಿ ಸುರಿದ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆ ನಿಟ್ಟಿಸುರು ಬಿಟ್ಟಂತಾಯಿತು.
ಗಾಳಿ ಬೀಸಿದ ಪರಿಣಾಮವಾಗಿ ಕೆಲ ಸ್ಥಳಗಳಲ್ಲಿ ಮರಗಳು ಧರೆಗೂರುಳಿದ ಘಟನೆ ಸಂಭವಿಸಿದೆ.
ಕೊಟ್ಟೂರು ಪಟ್ಟಣಕ್ಕೆ ಮಳೆರಾಯ ಆಗಮಿಸಿದರೆ ಸಾಕು ಬಸ್ ನಿಲ್ದಾಣವು ಕೆರೆಯಾಗಿ ನಿರ್ಮಾಣಗೊಳ್ಳುತ್ತಿದೆ.
ಹಿಂದಿನ ವರ್ಷ ಇದೆ ಮಳೆ ಸಂಭವಿಸಿದಾಗ ಮಾನ್ಯ ಶಾಸಕರಾದ ನೇಮಿರಾಜ್ ನಾಯ್ಕ್ ಕೆಲವೇ ದಿನಗಳಲ್ಲಿ ಈ ಬಸ್ ನಿಲ್ದಾಣ ಸುತ್ತ  ಒತ್ತುವರಿಯಾದ ಜಾಗವನ್ನು ಅಳತೆ ಮಾಡಿಸಿ ಈ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಕೆಲವೇ ದಿನಗಳಲ್ಲಿ ಏರಿಸಲು ಶ್ರಮ ಪಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಈ ಆಶ್ವಾಸನೆ ಯಾವುದೇ ಕಾರ್ಯ ರೂಪಕ್ಕೆ ಬಾರದೇ ಆಶ್ವಾಸನೆಯಾಗಿ ಉಳಿದಿದ್ದ ಪರಿಣಾಮವಾಗಿ ಇಲ್ಲಿನ ಸಾರ್ವಜನಿಕರು ಅಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿ ನಿಂತ ನೀರಿನಲ್ಲಿ ತಾಯಿ ಮಗು ತಮ್ಮ ಊರಿಗೆ ತೆರಳಲು ನೀರಿನಲ್ಲಿ ನಡೆದುಕೊಂಡು ಬರುವಾಗ ಕಾಲು ಜಾರಿ ಬಿದ್ದುದರಿಂದ ನನ್ನ ಮಗುವಿಗೆ ಹಾನಿಯಾಗಬಹುದು ಎಂದು ಮಗುವನ್ನು ಬಿಗಿ ತಬ್ಬಿಕೊಂಡು ಆ ಮಗುವನ್ನು ನೀರಿನಿಂದ ಹೊರ ತಂದ ಮನ ಕಲಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಷ್ಟೇಲ್ಲಾ ಘಟನೆಗಳು ಸಂಭವಿಸಿದೆ ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ಇತ್ತ ಗಮನ ಹರಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಇಲ್ಲಿನ ಸಾರ್ವಜನಿಕರ ಅಕ್ರೋಶವಾಗಿದೆ.
ಪ್ರತಿ ಬಾರಿ ಮಳೆ ಬಂದರೆ ಸಾಕು ಇಲ್ಲಿನ ಬಸ್ ನಿಲ್ದಾಣ ಈಜುಕೊಳವಾಗಿ ನಿರ್ಮಾಣಗೊಳ್ಳುತ್ತಿದೆ, ಇದರಲ್ಲಿ ಈಜಾಡಲು ರಸೀದಿಯನ್ನು ಬಸ್ ನಿಲ್ದಾಣಧಿಕಾರಿಗಳಿಂದ ತೆಗೆದುಕೊಳ್ಳಬೇಕೋ ಅಥವಾ ಸಂಬಂಧಪಟ್ಟ ಜನಪ್ರತಿನಿಧಿಗಳಿಂದ ತೆಗೆದುಕೊಳ್ಳಬೇಕೋ ಎಂಬ ವ್ಯಂಗ್ಯ ಮಾತುಗಳು ಸಾರ್ವಜನಿಕರ ವಲಯದಲ್ಲಿ  ಕೇಳಿ ಬರುತ್ತಿದೆ.