ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಬಸವ ಜಯಂತಿ ಆಚರಣೆ

ದಾವಣಗೆರೆ.ಮೇ.೧೬; 12ನೇ ಶತಮಾನದ ಬಸವಾದಿ ಶರಣರು ಜೀವ ವಿರೋಧಿಯಾದ ಸ್ಥಾವರ ತತ್ವ ಮತ್ತು ಕರ್ಮ ಸಿದ್ದಾಂತಕ್ಕೆ ಬದಲಾಗಿ ಜೀವ ಪರವಾದ ಜಂಗಮ ತತ್ವ ಮತ್ತು ಕಾಯಕ ಸಿದ್ಧಾಂತವನ್ನು ಜಾರಿಗೆ ತಂದು ಲೋಕದ ಸಕಲರಿಗೂ ಲೇಸನೆ ಬಯಸಿದರು ಎಂದು ಚಿಂತಕರಾದ ಡಾ. ಬಸವರಾಜ ನಲ್ಲಿಸರ ಹೇಳಿದರು.ದಾವಣಗೆರೆಯ ಅಖಿಲ ಭಾರತ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಆನ್ಲೈನ್ ಅರಿವಿನ ಮನೆಯ ಶರಣ ಚಿಂತನಗೋಷ್ಠಿ -7ರಲ್ಲಿ “ಬಸವ ಜಯಂತಿ” ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಾ 21ನೇ ಶತಮಾನದಲ್ಲಿ ಈ ವೈಜ್ಞಾನಿಕ ಯುಗದಲ್ಲಿಯೂ ಕೂಡ ಇನ್ನೂ ಹಲವಾರು ಮನೆಗಳಲ್ಲಿ ಹಾಗೂ ಮಠಗಳಲ್ಲಿ ವೈದಿಕ ಸಂಸ್ಕೃತಿ ಜಾರಿಯಲ್ಲಿದೆ. ಜಾತಿ ಮತ್ತು ಧರ್ಮವನ್ನು ರಾಜಕೀಯ ಮತ್ತು ಮಾರಾಟದ ವಸ್ತುವನ್ನಾಗಿ ಮಾಡಿ ಬಡ ಜನತೆಯನ್ನು ಹಿಂದುಳಿದ ವರ್ಗವನ್ನು ಶೋಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಗುರಿ ಮತ್ತು ಮಾರ್ಗ ಎರಡು ಪವಿತ್ರವಾಗಿದ್ದರೆ ಲೋಕ ಶಾಂತಿಯಿಂದ ಇರಲು ಸಾಧ್ಯ 12ನೇ ಶತಮಾನದ ಬಸವಾದಿ ಶರಣರ ಗುರಿ ಮತ್ತು ಮಾರ್ಗಗಳು ಎರಡು ಕೂಡ ಪವಿತ್ರವಾಗಿದ್ದವು ರಾಜಶ್ರಯದ ಸಾಹಿತ್ಯವನ್ನು ಜನ ಸಾಮಾನ್ಯರ ಸಾಹಿತ್ಯವನ್ನಾಗಿಸಿದರು. ಜನಸಾಮಾನ್ಯರ ಆಶಯಗಳನ್ನು ವಚನಗಳ ಮೂಲಕ ಮುನ್ನಲೆಗೆ ತಂದರು .ಜಾತಿ ವಿನಾಶವಾಗದೆ ಸಮಾನತೆ ಅಸಾಧ್ಯ ಬಸವಣ್ಣವರು ಇವನಾರವ ಯುವ ನಾರವ ಎಂದಣಿಸದೆ ಇವ ನಮ್ಮವ ಇವ ನಮ್ಮವ ಎಂಬ ವಿಶ್ವಮಾನವ ಸಂದೇಶವನ್ನು ಸಾರಿದರು ಎಂದು ತಿಳಿಸಿದರು.ಶಸಾಪ ಗೌರವಾಧ್ಯಕ್ಷರಾದ ಡಾ.ಎಂ ಜಿ ಈಶ್ವರಪ್ಪ ಕಾರ್ಯಕ್ರಮದಲ್ಲಿ ಆಶಯ ನುಡೆಗಳನ್ನಾಡುತ್ತಾ ಬಸವ ಪೂರ್ವ ಯುಗ ಸಂಸ್ಕೃತ ಯುಗವಾಗಿತ್ತು ಬಸವಾದಿ ಶರಣರು ಕನ್ನಡ ಯುಗವನ್ನು ಆರಂಭಿಸಿ ಜನರಾಡುವ ಭಾಷೆಯಲ್ಲಿ ಸಾಹಿತ್ಯವನ್ನು ಸೃಷ್ಟಿಸಿ ಕೆಳ ವರ್ಗದ ಜನರನ್ನು ಮುನ್ನಲೆಗೆ ತಂದು ಸಮ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಬಸವಣ್ಣನವರು ಸಮ ಸಮಾಜ ನಿರ್ಮಿಸಲು ಅನುಭವ ಮಂಟಪ ಮತ್ತು ಮಹಾಮನೆಯ ಕಲ್ಪನೆಯನ್ನು ಜಾರಿಗೆ ತಂದರು. ಕಲ್ಯಾಣ ರಾಜ್ಯ ಸೃಷ್ಟಿಯಾದದ್ದು ಅನುಭವ ಮಂಟಪದಿಂದ ಸಮ ಸಮಾಜ ಸೃಷ್ಟಿ ಆದದ್ದು ಮಹಾಮನೆಯಿಂದ ಎಂದು ತಿಳಿಸಿದರು.ಶಸಾಪ ಅಧ್ಯಕ್ಷರಾದ ಕೆ.ಬಿ.ಪರಮೇಶ್ವರಪ್ಪ ಮಾತನಾಡಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಿರಂತರವಾಗಿ ಆನ್ಲೈನ್ ಅರಿವಿನ ಮನೆಯ ಚಿಂತನಾಗೋಷ್ಠಿ ಕಾರ್ಯಕ್ರಮ ನಡೆಸುತ್ತಿದ್ದು ಸಂಚಿಕೆ -7 ರಲ್ಲಿ ” ಬಸವ ಜಯಂತಿಯ ” ವಿಶೇಷ ಕಾರ್ಯಕ್ರಮವನ್ನು ಹಮ್ಮಕೊಳ್ಳಲಾಗಿದೆ ಈ ಕಾರ್ಯಕ್ರಮವು ಶರಣರ ತತ್ವಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಾಗೂ ಬಸವ ಜಯಂತಿ ಕುರಿತು ಮಾತನಾಡಿದರು. ಸಂವಾದದಲ್ಲಿ ಪಾಲ್ಗೊಂಡು ಶರಣ ಎಂ.ಜಿ.ಸಿದ್ದರಾಮಯ್ಯ ಅಧ್ಯಕ್ಷರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ತುಮಕೂರು, ಚಂದ್ರಶೇಖರ್ ಎನ್. ಪಿ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ದೆಹಲಿ ಘಟಕ, ಶರಣ ಡಾ. ರಣಧೀರ್ ಮತ್ತು ಶರಣೆ ಗೀತಾ ಬಸವರಾಜ್ ಅವರು ಮಾತನಾಡಿದರು.ವಚನ ಪ್ರಾರ್ಥನೆ ಮತ್ತು ವಚನ ಮಂಗಳವನ್ನು ಶರಣ ಬಿ.ಟಿ.ಪ್ರಕಾಶ್ ಅವರು ನಡೆಸಿಕೊಟ್ಟರು. ಶರಣ ಆರ್. ಸಿದ್ದೇಶಪ್ಪ ಸರ್ವರನ್ನು ಸ್ವಾಗತಿಸಿದರು.ಶರಣ ಎನ್.ಟಿ. ಸಣ್ಣಮಂಜುನಾಥ  ಶರಣು ಸಮರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ   ಭರ್ಮಪ್ಪ ಮೈಸೂರ್ ನಡೆಸಿಕೊಟ್ಟರು.