ಡೆಂಗ್ಯೂ ನಿಯಂತ್ರಣಕ್ಕೆ ಪಾಲಿಕೆ ಕ್ರಮ
ಬೆಂಗಳೂರು, ಮೇ.೧೬-ಡೆಂಘೀ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ನಗರದಲ್ಲಿಂದು ರಾಷ್ಟ್ರೀಯ ಡೆಂಘೀ ದಿನಾಚರಣೆಯ ಅಂಗವಾಗಿ ಪೂರ್ವ ವಲಯದ ರಾಮಸ್ವಾಮಿ ಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಹೆಚ್ವಾಗಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿಂಪಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬೀಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿದಂತೆ ಇನ್ನಿತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸಂಬಂಧ ಅಂತಹ ಜಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಯಾ ವಲಯದ ವಾರ್ಡ್ ಮಟ್ಟದಲ್ಲಿ ಒಂದು ವಾರ್ಡ್ ಗೆ ೪ ಔಷಧಿ ಸಿಂಪಡೆಣೆ ಮಾಡುವ ತಂಡಗಳನ್ನು ನಿಯೋಜನೆ ಮಾಡಿದ್ದು, ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ಹೇಳಿದರು.
ಲಾರ್ವಾ ಸಮೀಕ್ಷೆ ಪ್ರಾರಂಭ:ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಘೀ ರೋಗ ಹರಡುತ್ತದೆ. ಆ ಸೊಳ್ಳೆಗಳು ತೆರೆಡಿಟ್ಟ ನೀರಿನ ತೊಟ್ಟಿಗಳು, ಏರ್ ಕೂಲರ್ ಗಳು, ಹೂವಿನ ಕುಂಡದ ತಟ್ಟೆಗಳು, ಬಕೆಟ್ ಗಳು, ಸೀಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪುಗಳು, ಒಡೆದ ಟೈರ್ ಗಳಲ್ಲಿ ಉತ್ಪತ್ತಿಯಾಗುತ್ತವೆ.
ಈ ಸಂಬಂಧ ಕೊಳಚೆ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ತಂಡಗಳನ್ನು ರಚಿಸಿಕೊಂಡು ಮನೆ-ಮನೆ ಭೇಟಿ ನೀಡಿ
ಡೆಂಘೀ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಭಿಯಾನ: ನಗರದಲ್ಲಿ ಡೆಂಘೀ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಆಯಾ ವಲಯಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಜಾಥಾ ಹಾಗೂ ಪಾಲಿಕೆಯ ಕಸದ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಡೆಂಘೀ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಸಲಾಗುತ್ತಿದೆ. ಜೊತೆಗೆ ಮನೆ ಮನೆಗೆ ಡೆಂಗೀ ನಿಯಂತ್ರಣದ ಕುರಿತು ಬಿತ್ತಿಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ. ಮದನಿ, ಪೂರ್ವ ವಲಯ ಆರೊಗ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮಿ, ಡೆಂಗೀ ನೋಡಲ್ ಅಧಿಕಾರಿ ಸುಜಾತಾ, ಆರೋಗ್ಯ ವೈದ್ಯಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.