ಮನಸ್ಸಿನಿಂದ ಖಾದಿ ಖಾಕಿ ಖಾವಿ ಕಾಯಕ ಮಾಡಿದರೆ ಜನಕಲ್ಯಾಣ ಸಾಧ್ಯ;  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ
ಕಲಬುರ್ಗಿ- ಮೇ 16: ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಭಾರತೀಯ ಸಂಸ್ಕೃತಿ ಎಲ್ಲರನ್ನು ಒಗ್ಗೂಡಿಸುವುದೇ ಆಗಿದೆ ಹೊರತು ವಿಘಟಿಸುವುದಲ್ಲ. ಶುದ್ಧ ಮನಸ್ಸಿನಿಂದ ಖಾದಿ ಖಾಕಿ ಖಾವಿ ಕಾಯಕ ಮಾಡಿದರೆ ಜನಕಲ್ಯಾಣದ ಜೊತೆಗೆ ಲೋಕ ಕಲ್ಯಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲವೆAದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಬುಧವಾರ ಸಂಜೆ ತಾಲೂಕಿನ ಶ್ರೀನಿವಾಸ ಸರಡಗಿ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಡಾ.ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳವರ ಷಷ್ಠಿಪೂರ್ತಿ ಅಂಗವಾಗಿ ಜರುಗಿದ ಭಕ್ತ ಹಿತ ಚಿಂತನ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಸ್ವಾರ್ಥರಹಿತ ಬದುಕಿಗೆ ಬೆಲೆಯಿದೆ ಮತ್ತು ಬಲವಿದೆ. ಹಿರಿಯರ ಮೌಲ್ಯಾಧಾರಿತ ಚಿಂತನಗಳು ಬಾಳಿನ ಆಶಾಕಿರಣವಾಗಿವೆ. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಶಸ್ತç ಪ್ರಭುತ್ವ ಮತ್ತು ಅರ್ಥಗಳು ಅಜ್ಞಾನಿಯ ಕೈಯಲ್ಲಿದ್ದರೆ ಸರ್ವನಾಶ. ಅದೇ ಸಜ್ಜನರ ಕೈಯಲ್ಲಿದ್ದರೆ ಜನಹಿತಾತ್ಮಕ ಕಾರ್ಯಗಳು ನಡೆಯುತ್ತವೆ. ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಗುರುವಿನ ಧರ್ಮವಾಗಿದೆ. ಪ್ರಾಪಂಚಿಕ ಸಂಬAಧಗಳು ಕೆಲವು ಸಂದರ್ಭಗಳಲ್ಲಿ ಕೆಡಬಹುದು. ಆದರೆ ಗುರು ಶಿಷ್ಯರ ಸಂಬAಧ ಚಿರಂತನ ಮತ್ತು ನಿತ್ಯ ನೂತನ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ವಿಕಾಸಗೊಳ್ಳಲು ಧರ್ಮದ ದಶ ಸೂತ್ರಗಳನ್ನು ಬೋಧಿಸಿದ್ದಾರೆ. ಅವರ ವಿಚಾರ ಧಾರೆಗಳು ಜೀವನ ವಿಕಾಸಕ್ಕೆ ಭದ್ರ ಅಡಿಪಾಯವಾಗಿವೆ. ಡಾ.ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಎಲ್ಲೆಡೆ ಸಂಚರಿಸಿ ವೀರಶೈವ ಧರ್ಮ ಸಂಸ್ಕೃತಿಯನ್ನು ಪಸರಿಸುವ ಮೂಲಕ ಜನ ಸಮುದಾಯವನ್ನು ಜಾಗೃತಗೊಳಿಸುತ್ತಿರುವುದು ಸಂತೋಷದ ಸಂಗತಿ. ಇಂದು ಷಷ್ಟಿಪೂರ್ತಿ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಂದೊAದು ದಿನ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಲೆಂದು ಶುಭ ಹಾರೈಸಿದರು.