ಗಾಂಧಿ ಪುರಸ್ಕಾರ ಪ್ರಶಸ್ತಿಯಲ್ಲಿ ತಾರತಮ್ಯ-ಆರೋಪ
ಸಂಜೆವಾಣಿ ವಾರ್ತೆ
ಮಂಡ್ಯ:ಸೆ.23- ಗ್ರಾಮ ಪಂಚಾಯಿತಿಗಳಿಗೆ ನೀಡುವ ಗಾಂಧಿ ಪುರಸ್ಕಾರ ಪ್ರಶಸ್ತಿಗೆ ಶಿಫಾರಸ್ಸು ಮಾಡುವಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ತಾಲೂಕಿನ ಗೋಪಾಲಪುರ ಗ್ರಾ.ಪಂ. ಉಪಾಧ್ಯಕ್ಷ ಕೆಂಪಾಚಾರಿ ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸರ್ಕಾರ ಮಾರ್ಗಸೂಚಿ ಮಾಡಿದ್ದರೂ ಸಹ ತಾಲೂಕು ಪಂಚಾಯಿತಿ ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಗ್ರಾಮ ಪಂಚಾಯಿತಿಗಳನ್ನು ಗಾಂಧಿ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಶಸ್ತಿಗೆ ಅರ್ಹವಲ್ಲದ ಪಂಚಾಯಿತಿಗೆ ಹೆಚ್ಚು ಅಂಕಗಳನ್ನು ನೀಡಿ ಶಿಫಾರಸ್ಸು ಮಾಡುತ್ತಿದ್ದಾರೆ. ಇದರಿಂದಾಗಿ ನಮ್ಮ ಪಂಚಾಯಿತಿ ಸೇರಿದಂತೆ ಹಲವಾರು ಪಂಚಾಯಿತಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದÉವೆ ಎಂದು ಹೇಳಿದರು.
ಸಮರ್ಪಕವಾಗಿ ಅಭಿವೃದ್ಧಿ ಮಾಡಿ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿ ಮಾಡಿರುವ ಗ್ರಾಮ ಪಂಚಾಯಿತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಬೇಕು. ಯಾರದ್ದೋ ಶಿಫಾರಸ್ಸಿನಿಂದ ಮಾಡುವುದು ಸರಿಯಲ್ಲ ಎಂದು ಅವರಿಗೆ ಮನವಿ ಮಾಡಿದ್ದು, ಈ ಬಗ್ಗೆ ತಾವೇ ಖುದ್ದಾಗಿ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಒಂದು ವೇಳೆ ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು ಯಾವುದೇ ಕಾರ್ಯಗಳನ್ನು ಮಾಡದ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ತಕ್ಷಣ ಆಗಿರುವ ಲೋಪಗಳನ್ನು ಸರಿಪಡಿಸಬೇಕು. ಗಾಂಧಿ ಗ್ರಾಮ ಪುರಸ್ಕಾರವನ್ನು ಅಭಿವೃದ್ಧಿ ಮಾಡಿರುವ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು. ಇಲ್ಲದಿದ್ದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಡಗೂಡಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕೆಂಪಾಚಾರಿ ಎಚ್ಚರಿಕೆ ನೀಡಿದರು.
ಸದಸ್ಯರುಗಳಾದ ಪುಟ್ಟಮ್ಮ, ಸುಧಾ ಸಿದÉಗೌಡ, ಕವಿತಾ, ಮುಖಂಡ ಭಾನುಪ್ರಕಾಶ್ ಇತರರು ಇದ್ದರು.