ನಮ್ಮೆಲ್ಲರ ಹೃದಯದಲ್ಲಿ ಜಗಜ್ಯೋತಿ ಬಸವೇಶ್ವರ ಅನಾವರಣವಾಗಲಿ
ಸಂಜೆವಾಣಿ
ಚಿತ್ರದುರ್ಗ.ಮೇ.16; ಸರ್ಕಾರದ ಆದೇಶದಂತೆ ಎಲ್ಲಾ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರವನ್ನು ಅನಾವರಣಗೊಳಿಸಲಾಗಿದೆ. ನಿಜವಾಗಿಯೂ ನಮ್ಮೆಲ್ಲರ ಹೃದಯದಲ್ಲಿ ಜಗಜ್ಯೋತಿ ಬಸವೇಶ್ವರರು ಅನಾವರಣಗೊಳ್ಳಬೇಕು. ಅಂದಾಗ ಮಾತ್ರ ಬಸವೇಶ್ವರರ ತತ್ವಗಳನ್ನು ರೂಢಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ ವ್ಯಕ್ತಪಡಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ನಾಡಿನ ಸಾಂಸ್ಕøತಿಕ ನಾಯಕ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಗಳಿಗೆ ಪುಷ್ಪ ನಮನ ಸಮರ್ಪಿಸಿ ಅವರು ಮಾತನಾಡಿದರುದುಡಿಮೆ ಹಾಗೂ ದಾಸೋಹ ಎಂಬ ಎರಡು ಮಹತ್ವವಾದ ತತ್ವಗಳನ್ನು ಬಸವೇಶ್ವರರು ನಾಡಿಗೆ ಪರಿಚಯಿಸಿದ್ದಾರೆ. ಕಾಯಕದಲ್ಲಿ ಕೈಲಾಸ ಕಂಡವರು ಶಿವಶರಣರು. 12ನೇ ಶತಮಾನ ಅನುಭವ ಮಂಟಪದಲ್ಲಿ ನಿಜವಾದ ಪ್ರಜಾಪ್ರಭುತ್ವದ ಕುರುಹು ಕಾಣಬಹುದು. ಅನುಭವ ಮಂಟಪ ಜಾತಿ ಆಧಾರದ ಮೇಲೆ ರೂಪುಗೊಂಡಿಲ್ಲ. ಎಲ್ಲಾ ಜಾತಿಯ ಮಹನೀಯರು ಅನುಭವ ಮಂಟಪದ ಸದಸ್ಯರಾಗಿದ್ದರು. ಎಲ್ಲಾ ಶಿವಶರಣರು ಕಾಯಕ ತತ್ವದಲ್ಲಿ ನಂಬಿಕೆಯಿಟ್ಟು, ಒಂದಲ್ಲ ಒಂದು ದುಡಿಮೆಯಲ್ಲಿ ತೊಡಗಿದ್ದರು. ಇದರಿಂದ ಬಂದ ಆದಾಯವನ್ನು ದಾಸೋಹಕ್ಕೆ ಬಳಸಿಕೊಳ್ಳುತ್ತಿದ್ದರು. ಬಿಜ್ಜಳ ರಾಜನ ಕೋಶದ ಮಂತ್ರಿಯಾಗಿ ಬಸವಣ್ಣ ಕೆಲಸ ನಿರ್ವಹಿಸಿದರೂ, ಒಂದು ಬಿಡಿಗಾಸನ್ನು ರಾಜ್ಯದ ಕೋಶದಿಂದ ದಾಸೋಹಕ್ಕೆ ಬಳಸಿಕೊಳ್ಳಲಿಲ್ಲ. ನಿಷ್ಠೆಯಿಂದ ಶಿವಶರಣ ದುಡಿಮೆಯಿಂದಲೇ ದಾಸೋಹ ಕೈಗೊಂಡರು. ಕೋಶದ ಹಣ ಬಳಕೆ ಮಾಡಿದಂತೆ ಆರೋಪ ಬಂದ ತಕ್ಷಣ ತನ್ನ ಸ್ಥಾನವನ್ನು ಬಸವೇಶ್ವರರು ತೊರೆದರು. ನಾವು ದುಡಿಯಬೇಕು, ದುಡಿದಿದ್ದನ್ನು ಸಮಾಜಕ್ಕೆ ಹಂಚಬೇಕು. ಆದರೆ ಇಂದಿನ ಸಮಾಜದಲ್ಲಿ ಸ್ವಾರ್ಥದಿಂದ ನನಗೆ, ನನ್ನ ಕುಟುಂಬಕ್ಕೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮೊಮ್ಮಕ್ಕಳಿಗೆ ಎಂದು ಸಂಪತ್ತನ್ನು ಕೂಡಿಡುವ ಪ್ರವೃತ್ತಿ ಬೆಳೆಯುತ್ತಿದೆ. ಈ ಪರಿಕಲ್ಪನೆಯಿಂದ ಆಚೆ ಬಂದು ಸಮಾಜಮುಖಿಯಾಗಿ ಜೀವನ ನಡೆಸುವುದನ್ನು 12ನೇ ಶತಮಾನದಲ್ಲಿ ಬಸವೇಶ್ವರರು ನಮ್ಮೆಲ್ಲರಿಗೂ ತೋರಿಸಿಕೊಟ್ಟರು. ಇದೇ ಮಾದರಿಯಲ್ಲಿ ನಡೆ-ನುಡಿ ಒಂದಾಗಿ ಬಸವೇಶ್ವರರು ಬಾಳಿದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ವೀರಶೈವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣನವರ ನಡೆ-ನುಡಿ ಪಾಲನೆಯಿಂದ ನಮಗೆ ಯಾವುದೇ ವಿಚಾರದಲ್ಲಿಯೂ ಹಿನ್ನಡೆಯಾಗುವುದಿಲ್ಲ. ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ, ಜಾತಿವ್ಯವಸ್ಥೆಯನ್ನು ತೊಡೆದು ಹಾಕಿದ ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು.