ಸಕಾಲಕ್ಕೆ ಪರೀಕ್ಷೆ ಮಾಡಿಸಿ, ತಾಯಿ ಮರಣ ತಗ್ಗಿಸಿ: ಟಿಹೆಚ್‍ಒ ಡಾ.ಬಿ.ವಿ.ಗಿರೀಶ್
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.16: ಕಾಲಕಾಲಕ್ಕೆ ಗರ್ಭಿಣಿಯರು ತಪಾಸಣೆ ಮಾಡಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದಲ್ಲಿ ತಾಯಿ ಮರಣ ತಪ್ಪಿಸಬಹುದು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗರ್ಭಿಣಿ ತಾಯಂದಿರುಗಳಿಗೆ ಮಾಹಿತಿ ಶಿಕ್ಷಣ ನೀಡಿ ಅವರು ಮಾತನಾಡಿದರು.ಪ್ರತಿ ತಿಂಗಳು 9ನೇ ತಾರೀಖು ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದು, ಎಲ್ಲಾ ಗರ್ಭಿಣಿ ತಾಯಂದಿರು ಪರೀಕ್ಷೆಗೆ ಒಳಪಟ್ಟು, ಸೂಕ್ತ ಚಿಕಿತ್ಸೆ ಪಡೆಯಬೇಕು. 1 ಲಕ್ಷ ಜೀವಂತ ಜನನಕ್ಕೆ ರಾಜ್ಯದಲ್ಲಿ ತಾಯಿ ಮರಣ ದರ 70 ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ತಾಯಿ ಮರಣ ದರ 69 ಇದ್ದು, ಯಾವುದೇ ತಾಯಿಯು ಗರ್ಭವತಿ ಎಂಬ ಕಾರಣದಿಂದ ಮರಣ ಹೊಂದಬಾರದು. ತಾಯಿ ಮರಣ ತಗ್ಗಿಸಲು ಗರ್ಭಿಣಿ ಎಂದಾಕ್ಷಣ ಆದಷ್ಟು ಬೇಗ ವೈದ್ಯರಲ್ಲಿ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.ಮಕ್ಕಳ ತಜ್ಞ ಹಾಗೂ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತಿಮ್ಮೇಗೌಡ ಮಾತನಾಡಿ, ಸರ್ಕಾರದ ಯೋಜನೆಗಳು ಗ್ರಾಮಾಂತರ ಪ್ರದೇಶದ ಕಟ್ಟ ಕಡೆಯ ತಾಯಿಗೂ ತಲುಪಿಸುವ ನಿಟ್ಟಿನಲ್ಲಿ ಜನನಿ ಸುರಕ್ಷಾ ಯೋಜನೆ, ಜೆಎಸ್‍ಎಸ್‍ಕೆ ಇವು ಸರ್ಕಾರದ ಉಪಯುಕ್ತ ಯೋಜನೆಗಳಾಗಿದ್ದು, ಗರ್ಭಿಣಿ ತಾಯಂದಿರುಗಳು ಪ್ರತಿ ತಿಂಗಳು ಒಂಬತ್ತನೇ ತಾರೀಕು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಟ್ಟು ಇದರ ಪ್ರಯೋಜನ ಪಡೆಯಬೇಕು ಎಂದರು.ಮಧುಮೇಹ, ರಕ್ತದೊತ್ತಡ, ಅಸ್ತಮಾ, ಹಿಂದಿನ ಹೆರಿಗೆ ಸಿಜರಿನ್ ಆದವರು, ಅವಳಿ ಮಕ್ಕಳ ಹೊಂದಿದವರು, ಇಂಥವರಿಗೆ ಪ್ರತಿ ತಿಂಗಳು 24 ನೇ ತಾರೀಖಿನಂದು ವಿಶೇಷ ಗರ್ಭಿಣಿಯರ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ರಕ್ತ ಹೀನತೆ ತಡೆಯಲು ಕಬ್ಬಿನಾಂಶಗಳ ಮಾತ್ರೆ ಇತರೆ ಸೇವಾ ಸೌಲಭ್ಯಗಳನ್ನು ಪಡೆದು ತಾಯಂದಿರು ಆರೋಗ್ಯವಂತ ಮಗುವನ್ನು ಹೆತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಪವಿತ್ರ ಮಾತನಾಡಿ, ಕೇಂದ್ರ ಸ್ಥಾನದಲ್ಲಿ ಇರುವ ನಾವು ನಿಮ್ಮೊಂದಿಗಿದ್ದೇವೆ, ತಮ್ಮ ಗ್ರಾಮಗಳ ಸಮೀಪವೇ ಹೆರಿಗೆ ಸೇವಾ ಸೌಲಭ್ಯ ಇರುವುದು ತಮಗೆಲ್ಲಾ ಸಂತೋಷದ ವಿಷಯ. ಗ್ರಾಮಾಂತರ ಪ್ರದೇಶದಲ್ಲಿ ಹೆರಿಗೆ ಮಾಡಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರೆತಗ್ಗಿಸಿ ತುರ್ತು ಸಂದರ್ಭದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗೆ ಕಳುಹಿಸಲು ಆಂಬುಲೆನ್ಸ್ ವ್ಯವಸ್ಥೆ ಇರುವುದರಿಂದ ಯಾರೂ ಭಯಭೀತರಾಗದೆ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಕೂಡ ಹೆರಿಗೆ ಸೌಲಭ್ಯ ಇರುವ ಪ್ರಯುಕ್ತ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.