ಮೇ೨೩ಕ್ಕೆ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಅವಿಮುಕ್ತೇಶ್ವರ ರಥದ ಚಕ್ರಕ್ಕೆ ಪೂಜೆ ಸಲ್ಲಿಸಿ ತೇರು ಕಟ್ಟಲು ಚಾಲನೆ
ಹೊಸಕೋಟೆ,ಮೇ೧೬:ನಗರದ ಇತಿಹಾಸ ಪ್ರಸಿದ್ದ ಶ್ರೀ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಮೇ೨೩ರಂದು ನಡೆಯಲಿದ್ದು ರಥದ ಚಕ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತೇರು ಕಟ್ಟುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು.
ನಗರದ ಅವಿಮುಕ್ತೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಮಿತಿ ಕನ್ವಿನರ್ ಕೇಶವಮೂರ್ತಿ ನೇತೃತ್ವದಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಬ್ರಹ್ಮರಥೋತ್ಸವ ಸಮಿತಿ ಕನ್ವಿನರ್ ಕೇಶವಮೂರ್ತಿ ಮಾತನಾಡಿ ಹೊಸಕೋಟೆ ನಗರದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಇತಿಹಾಸ ಪ್ರಸಿದ್ದ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ ಈ ಭಾರಿ ಮೇ೨೩ರಂದು ನಡೆಯಲಿದ್ದು ಈಗಾಗಲೆ ಸಕಲ ಸಿದ್ದತೆಗಳನ್ನು ಸಮಿತಿ ಮೂಲಕ ಮಾಡಿಕೊಳ್ಳಲಾಗಿದೆ. ಪ್ರಥಮವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ರಥದ ಚಕ್ರಗಳಿಗೆ ಪೂಜೆ ಸಲ್ಲಿಸಿ ತೇರು ಕಟ್ಟಲು ಪ್ರಾರಂಭಕ್ಕೆ ಚಾಲನೆ ನೀಡಲಾಗಿದೆ. ಮೇ.೨೩ಕ್ಕೆ ನಡೆಯಲಿರುವ ರಥೋತ್ಸವಕ್ಕೆ ತೇರು ಸಿದ್ದಗೊಳ್ಳಲಿದ್ದು ಪ್ರತಿ ವರ್ಷದಂತೆ ಈ ವರ್ಷವು ಸಹ ಸಹಸ್ರಾರು ಸಂಖ್ಯೆಯಲ್ಲಿ ತಾಲೂಕಿನ ಜನ ಆಗಮಿಸಿ ರಥೋತ್ಸವದ ಯಶಸ್ವಿಗೆ ಸಹಕರಿಸಬೇಕು ಎಂದರು.
ರಥೋತ್ಸವ ಸಮಿತಿ ಸದಸ್ಯ ಹೆಚ್.ಎಂ.ಸುಬ್ಬರಾಜ್ ಮಾತನಾಡಿ ರಥೋತ್ಸವದ ಯಶಸ್ವಿಗೆ ಪಕ್ಷಾತೀತವಾಗಿ, ಧರ್ಮಾತೀತವಾಗಿ ನಗರದ ನಾಗರೀಕರ ಸಹಕಾರ ಅಗತ್ಯವಿದೆ. ರಥೋತ್ಸವ ಪ್ರಯುಕ್ತ ಮೇ.೧೯ರಿಂದಲೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಶ್ರದ್ದಾಭಕ್ತಿಯಿಂದ ಜರುಗಲಿದೆ. ಆದ್ದರಿಂದ ಪೂಜಾ ಕಾರ್ಯಕ್ರಮಕ್ಕೆ ನಾಗರೀಕರು ಸ್ವಯಂಪ್ರೇರಿತವಾಗಿ ಆಗಮಿಸಿ ನಗರದ ಒಳಿತಿಗೆ ದೇವರಲ್ಲಿ ಪ್ರಾರ್ಥಿಸಬೇಕು ಎಂದರು.
ತಹಸೀಲ್ದಾರ್ ವಿಜಯ್ ಕುಮಾರ್, ಬ್ರಹ್ಮರಥೋತ್ಸವ ಉಸ್ತುವಾರಿ ಸಮಿತಿ ಕಾರ್ಯದರ್ಶಿ ಗಾಯತ್ರಿ ವಿಜಯ್ ಕುಮಾರ್, ಸದಸ್ಯರಾದ ಎನ್.ಮುನಿರಾಜ್, ರಮೇಶ್ ಬಾಬು, ಸುನಿಲ್ ಕುಮಾರ್, ಗೋಪಾಲ್, ಶಾಂತಕುಮಾರ್, ಶಿವಾಜಿರಾವ್, ಉದಯ್ ಕುಮಾರ್, ಗೌತಮ್, ನವಾಜ್ ಇದ್ದರು.