ಜಂಬಗಿ, ಮಾದಾಳ ಕೆರೆಗೆ ನೀರು ತುಂಬುವಂತೆ ರೈತ ಸಂಘ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.16:ಜಂಬಗಿ, ಮಾದಾಳ ಕೆರೆ ನೀರು ತುಂಬುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದೆ.
ಜಂಬಗಿ ಕೆರೆ ಜಿಲ್ಲೆಯಲ್ಲಿಯೇ 2ನೇ ಅತೀ ದೊಡ್ಡ ಕೆರೆಯಾಗಿದ್ದು, ಹಾಗೂ ಹುಣಶ್ಯಾಳ (ಮಾದಾಳ) ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ 5-6 ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ಇದರಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು..
ಆಹೇರಿ ಗ್ರಾಮ ಗ್ರಾ.ಮ ಪಂಚಾಯತಿ ಮಾಜಿ ಚೇರಮನ್ ಬಸವರಾಜ ಗಾಣಿಗೇರ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರೂ, ಜಂಬಗಿ ಹಾಗೂ ಹುಣಶ್ಯಾಳ ಕೆರೆ ಮಾತ್ರ ತುಂಬದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ವಿಜಯಪುರ ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ ಅವರು 2 ದಿನದಲ್ಲಿ ಕೆರೆ ನೀರು ತುಂಬಿಸದಿದ್ದರೆ ಸಾವಿರಾರು ರೈತರೊಂದಿಗೆ ಕೆರೆಯಲ್ಲಿಯೆ ಕುಳಿತು ಧರಣಿ ಸತ್ಯಾಗ್ರಹ ಮಾಡಲಾಗುವುದು, ರೈತರ ನಿರ್ಣಯದಿಂದ ಅದು ಮುಂದೆ ಅಮರಣ ಉಪವಾಸ ಸತ್ಯಾಗ್ರಹ ಮಾಡಬಹುದು, ಅದಕ್ಕೆ ಅವಕಾಶ ನೀಡದೇ ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕೆರೆಗೆ ನೀರು ತುಂಬಿಸುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ಎಲ್ಲಾ 149 ಕೆರೆಗಳನ್ನು ತುಂಬಿದ್ದೇವೆ ಎಂದು ಹೇಳುತ್ತಿರುವ ಅಧಿಕಾರಿಗಳು ಕುದ್ದಾಗಿ ಸಮೀಕ್ಷೆ ಮಾಡಿ ಇದರಲ್ಲಿ ಅರ್ಧ ಮಾತ್ರ ಕೆರೆ ನೀರು ತುಂಬಿರುತ್ತಾರೆ, ಉಳಿದ ಅರ್ಧ ಕೆರೆ ತುಂಬದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ, ಇದರಿಂದ ಜನ ಜಾನುವಾರುಗಳಿಗೆ ಈ ಭೀಕರ ಬೇಸಿಗೆಯಲ್ಲಿ ಕುಡಿಯಲು ನೀರು ಸಿಗದೇ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಜಿಲ್ಲೆಯ 149 ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲಮಾಡಬೇಕು
-ಸಂಗಮೇಶ ಸಗರ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ