ಶಿಕ್ಷಣ ಕ್ಷೇತ್ರ ಹಾಳುಗೆಡವಿದ ಕಾಂಗ್ರೆಸ್
ಸಂಜೆವಾಣಿ ನ್ಯೂಸ್
ಮೈಸೂರು.ಮೇ.16:- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ಹಾಳುಗೆಡವಿದೆ. ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸಿದೆ ಎಂದು ಮಾಜಿ ಎಂಎಲ್‍ಸಿ ಅರುಣ್ ಶಾಪುರ ದೂರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ. 5, 8, 9ನೇ ತರಗತಿಗಳ ಪರೀಕ್ಷೆ ನಡೆಸುವ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಲಾಯಿತು. ಪರೀಕ್ಷೆ ವಿಚಾರ ನ್ಯಾಯಾಲಯದ ಮೆಟ್ಟಿಲೇರುವಂತಾಯಿತು. ಇಂದಿಗೂ ಪರೀಕ್ಷಾ ಫಲಿತಾಂಶ ಕೊಡಲು ಸಾಧ್ಯವಾಗಿಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೂ, ಶಿಕ್ಷಣಕ್ಕೂ ಸಂಬಂಧವೇ ಇಲ್ಲದಂತಾಗಿದೆ. ವೆಬ್ ಕಾಸ್ಟಿಂಗ್ ಬಗ್ಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಐದು ದಿನಗಳಿರುವಾಗ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ. ಕ್ಯಾಮರಾ ಕಣ್ಗಾವಲಿನಲ್ಲಿ ಭೀತಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಕಾರಣ ಫಲಿತಾಂಶ ಕುಸಿತ ಕಂಡಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಪರೀಕ್ಷೆ ವಿಚಾರದಲ್ಲಿ ತುಘಲಕ್ ಆಡಳಿತ ನಡೆಸಲಾಗಿದ್ದು, ಶಿಕ್ಷಕರ ಮೇಲೆ ಗದಾಪ್ರಹಾರ ನಡೆಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಎನ್‍ಇಪಿ ಕಿತ್ತುಹಾಕಿ ಎಸ್‍ಇಪಿ ಜಾರಿಗೊಳಿಸುತ್ತೇವೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ಕು ವರ್ಷದ ಪದವಿ ಬದಲು ಮೂರು ವರ್ಷದ ಪದವಿ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಕೆಲವೊಂದು ಶೈಕ್ಷಣಿಕ ಸೌಲಭ್ಯಗಳಿಂದ ರಾಜ್ಯದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಎನ್‍ಇಪಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದು, ರಾಜ್ಯ ಸರ್ಕಾರ ಸಂವೇದನಾಶೀಲತೆಯನ್ನೇ ಕಳೆದುಕೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಸಮರ್ಥರಾಗಿದ್ದು, ಅವರನ್ನು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಅಥವಾ ಜೆಡಿಎಸ್‍ನವರು ಸ್ಪರ್ಧಿಸುತ್ತಾರಾ ಎಂಬ ವಿಚಾರವನ್ನು ಪಕ್ಷದ ಹಿರಿಯ ನಾಯಕರು ಸ್ಪಷ್ಟಪಡಿಸುತ್ತಾರೆ. ಬಿಜೆಪಿ ಹಾಗೂ ಜೆಡಿಎಸ್ ಎನ್ನುವುದಕ್ಕಿಂತ ಎನ್‍ಡಿಎ ಅಭ್ಯರ್ಥಿ ಸ್ಪರ್ಧಿಸುತ್ತಾರೆ. ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದ್ದರೂ ಪಕ್ಷ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂಬ ವಿಶ್ವಾಸವಿದೆ. ಯಾರೇ ಅಭ್ಯರ್ಥಿಯಾದರೂ ನಮ್ಮ ಬೆಂಬಲ ಇರಲಿದೆ. ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡರಾದ ಕೇಬಲ್ ಮಹೇಶ್, ಮಹೇಶ್‍ರಾಜೇ ಅರಸ್ ಇದ್ದರು.