ಸ್ಫೂರ್ತಿ, ಭರವಸೆಯೊಂದಿಗೆ ಪರೀಕ್ಷೆಗೆ ತಯಾರಾದರೆ ಗೆಲುವು ನಿಶ್ಚಿತ: ಡಾ.ಸೋಮನಾಥ್ ಜಿ.ಪಾಟ್ನೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.16:- ಸ್ಪರ್ಧಾತ್ಮಕ ಯುಗದಲ್ಲಿ ಶಿಬಿರಾರ್ಥಿಗಳು ಒಂದು ಪರೀಕ್ಷೆಯಲ್ಲಿ ವಿಫಲರಾದರೆ ದೃತಿಗೆಡಬಾರದು. ಅದನ್ನು ಅನುಭವವಾಗಿ ಪರಿಗಣಿಸಿ ಸಫಲರಾಗುವತ್ತ ನಿರಂತರ ಶ್ರಮಹಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಉಪಕಾರ್ಯದರ್ಶಿ ಹಾಗೂ ಆರ್ಥಿಕ ಸಲಹೆಗಾರ ಡಾ.ಸೋಮನಾಥ್ ಜಿ.ಪಾಟ್ನೆ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಎಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ 50 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಮಾಡುವುದರಿಂದ ಸ್ಪರ್ಧೆ ಹೆಚ್ಚಾಗಿದೆ. ಹಾಗಾಗಿ ಕೆಲವರಿಗೆ ಕಷ್ಟ ಎನಿಸಬಹುದು. ಆದರೆ ನೀವುಗಳು ಸ್ವತಃ ಸ್ಫೂರ್ತಿ ಮತ್ತು ಭರವಸೆಯೊಂದಿಗೆ ಪರೀಕ್ಷೆಗೆ ತಯಾರಾದಲ್ಲಿ ಸಫಲರಾಗುವುದು ಸುಲಭ ಎಂದರು.
ಶಿಸ್ತು, ಸಂಯಮ, ಕ್ರಮಬದ್ಧ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಹಲವಾರು ಸಿದ್ಧತೆಗಳನ್ನು ಬಹಳ ಶ್ರದ್ಧೆಯಿಂದ ತಯಾರಿ ಮಾಡಿಕೊಳ್ಳಬೇಕು. ತರಬೇತಿಯ ಉಪಯೋಗ ಪಡೆದು ತಲ್ಲೀನತೆಯಿಂದ ಯಶಸ್ವಿಯಾಗುವೆಡೆಗೆ ಗಮನ ಹರಿಸಬೇಕು. ಗ್ರಾಮಾಂತರ ಭಾಗದವರಿಗೆ ತರಬೇತಿ ತುಂಬಾ ಉಪಯುಕ್ತವಾಗಿದೆ. ದಿನಪತ್ರಿಕೆ ಓದುವ ಕಲೆ ಕರಗತ ಮಾಡಿಕೊಳ್ಳಬೇಕು. ಸಮಾಜದ ಕೆಳಸ್ತರದವರಿಗೆ ಸಹಾಯ ಮಾಡಬೇಕೆಂಬ ಭಾವನೆ ಬೆಳೆಸಿಕೊಂಡರೆ ಸಾಧಿಸಲು ಮನೋಸ್ಥೈರ್ಯ ದೃಢವಾಗಲಿದೆ ಎಂದು ತಿಳಿಸಿದರು.
ಅಂತರ್ಜಾಲ, ನವ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತ ಉದ್ಯೋಗದ ಜತೆಗೆ ಶಿಕ್ಷಣ ಪಡೆಯಲು ಪ್ರಯತ್ನಿಸಿ ಇದಕ್ಕಾಗಿ ಕರಾಮುವಿ ನಿಮಗೆಲ್ಲರಿಗೂ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಅದನ್ನು ಸದುಪಯೋಗಪಡಿಸಿಕೊಂಡು ಯಶಸ್ಸಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಶಿಬಿರದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ ಪ್ರಿಯದರ್ಶಿನಿ ಮಾತನಾಡಿ, ಓದುವ ಸಂದರ್ಭದಲ್ಲಿ ಮನರಂಜನೆ ಪಡುವುದಕ್ಕಿಂತ, ಪರಿಶ್ರಮದಿಂದ ಓದಿ ಸಫಲರಾಗಿ ಮುಂದೆ ಜೀವನ ಪರ್ಯಂತ ಮನರಂಜನೆ ಪಡೆಯಬಹುದು ಎಂದು ಸಲಹೆ ನೀಡಿದರು.
ಇಂದಿನ ಏಕಾಗ್ರತೆಯ ದೊಡ್ಡ ಸವಾಲು ಮೊಬೈಲ್, ಸಾಮಾಜಿಕ ಜಾಲತಾಣ ಇವುಗಳನ್ನು ಜಾಗರೂಕತೆಯಿಂದ ಬಳಸಬೇಕು. ಏಕಾಗ್ರತೆ ಕಳೆದುಕೊಳ್ಳಬಾರದೆಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಐಎಎಸ್ ಅಥವಾ ಕೆಎಎಸ್ ಪರೀಕ್ಷೆಗಳಿಗೆ ಸಾಮಾನ್ಯವಾಗಿ ಪ್ರಬಂಧಗಳಿರುತ್ತವೆ. ನಾವು ಗಳಿಸಿಕೊಂಡ ಜ್ಞಾನವನ್ನು ಸರಳ ಭಾಷೆಯಲ್ಲಿ ಉತ್ತರ ಪತ್ರಿಕೆಯಲ್ಲಿ ಬರೆದರೆ ಮೌಲ್ಯ ಮಾಪನ ಮಾಡುವವರಿಗೂ ಅರ್ಥವಾಗಲಿದೆ. ಇದರಿಂದ ನಾವು ಹೇಳುವ ಸಂಗತಿ ಅವರಿಗೆ ಮನದಟ್ಟಾಗುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರು ದಿನಪತ್ರಿಕೆಗಳನ್ನು ಹೆಚ್ಚು ಓದಬೇಕು. ಸಂಪಾದಕೀಯ ಮತ್ತು ಪ್ರಮುಖ ಘಟನೆಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಓದಿನಲ್ಲಿ ಪ್ರಾಮಾಣಿಕತೆ, ಬದ್ಧತೆ, ಅಚಲ ವಿಶ್ವಾಸ ಹಾಗೂ ಸ್ಮಾರ್ಟ್ ಹಾರ್ಡ್ವರ್ಕ್ ಇದ್ದರೆ ಯಶಸ್ಸು ಸಾಧ್ಯ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿ ಪೆÇ್ರ.ಶರಣಪ್ಪ ವಿ.ಹಲಸೆ, ಪ್ರತಿ ವಿದ್ಯಾರ್ಥಿಯೂ ತನ್ನ ಅಧ್ಯಯನವನ್ನು ಶ್ರದ್ಧೆಯಿಂದ, ಯೋಜನೆ ಹಾಕಿಕೊಂಡು ಪುಟ ಪುಟ ಓದುವುದರೊಂದಿಗೆ ಪುಸ್ತಕವನ್ನು ಅಧ್ಯಯನ ಮಾಡುವಂತೆ ಇದೆಲ್ಲದರ ಸದುಪಯೋಗ ಪಡೆದುಕೊಳ್ಳಬೇಕು. ಆಗ ನಿಮ್ಮ ಜೀವನ ಸಾರ್ಥಕವಾಗಲಿದೆ. ಪ್ರತಿದಿನ ನೀವು ಯಾವ ರೀತಿ ಬಳಸಿಕೊಳ್ಳುತ್ತೀರಾ ಎಂಬುದರ ಮೇಲೆ ಸಫಲತೆ ನಿರ್ಧಾರವಾಗಲಿದೆ. ಉನ್ನತ ಅಧಿಕಾರ ಬೇಕೆಂದರೆ ಶ್ರಮವೂ ಉನ್ನತ ಮಟ್ಟದಲ್ಲಿರಬೇಕೆಂದು ಹೇಳಿದರು.
ಕುಲಸಚಿವ ಪೆÇ್ರ.ಕೆ.ಬಿ.ಪ್ರವೀಣ ಮಾತನಾಡಿ, ಪ್ರಸ್ತುತತೆ ಹಾಗೂ ನಾವೀನ್ಯತೆ ರೂಢಿಸಿಕೊಂಡು, ಸತತ ಅಭ್ಯಾಸದೊಂದಿಗೆ ನೈಪುಣ್ಯತೆ ಸಾಧಿಸಿದರೆ ಯಶಸ್ಸು ಹತ್ತಿರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಡಾ.ಹೆಚ್.ವಿಶ್ವನಾಥ್, ಡೀನ್ ಪೆÇ್ರ.ಲಕ್ಷ್ಮೀ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಡಾ.ಬೀರಪ್ಪ.ಹೆಚ್, ಸಿದ್ದೇಶ್ ಹೊನ್ನೂರ್, ಗಣೇಶ್.ಕೆ.ಜಿ. ಕೊಪ್ಪಲ್ ಉಪಸ್ಥಿತರಿದ್ದರು.