ಇಂಡಿಗನತ್ತ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ: ಗ್ರಾಮಸ್ಥರಿಂದ ಕುಂದುಕೊರತೆ ಆಲಿಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.15- ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಹಾಗೂ ಸುತ್ತಲಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿದರು.
ಇಂಡಿಗನತ್ತ, ತೊಳಸಿಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮೂಲಸೌಲಭ್ಯ ಕಲ್ಪಿಸುವಂತೆ ಕೋರಿ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಿ ಏಪ್ರಿಲ್ 26ರಂದು ಇಂಡಿಗನತ್ತ ಗ್ರಾಮದಲ್ಲಿ ಕೆಲ ಗ್ರಾಮಸ್ಥರು ಮತಗಟ್ಟೆ ದ್ವಂಸ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ಮರು ಮತದಾನ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪ್ರಸ್ತುತ ಅಲ್ಲಿನ ಸಮಸ್ಯೆ, ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮಸ್ಥರಿಂದ ಅಹವಾಲುಗಳನ್ನು ಆಲಿಸಿದರು.
ಇದೇ ವೇಳೆ ಗ್ರಾಮಸ್ಥರು ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಕರ್ಯಗಳನ್ನು ಕಲ್ಪಿಸಿಕೊಡಿ, ಮತಗಟ್ಟೆ ದ್ವಂಸ ಪ್ರಕರಣದಲ್ಲಿ ಅಮಾಯಕರಾಗಿರುವ ಸಂಬಂಧಿಗಳನ್ನು ಬಂಧಿಸಲಾಗಿದೆ. ಅವರನ್ನು ಬಿಡುಗಡೆ ಮಾಡಿಸಿಕೊಡುವಂತೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಿಮ್ಮಗಳ ನೋವು ನನಗೆ ತಿಳಿದಿದೆ. ಗ್ರಾಮಕ್ಕೆ ರಸ್ತೆ, ವಿದ್ಯುತ್, ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚಿಸಿ ಅಂತಿಮಗೊಳಿಸಲಾಗಿದೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಸಿದ್ದವಿದೆ. ಹಾಗೆಯೇ ಮತಗಟ್ಟೆ ದ್ವಂಸ ಪ್ರಕರಣದಲ್ಲಿ ಭಾಗಿಯಾದಂತಹ ವ್ಯಕ್ತಿಗಳು ನಿರ್ಭಯವಾಗಿ ಗ್ರಾಮಕ್ಕೆ ಆಗಮಿಸಿ ಜೀವನ ನಡೆಸಬಹುದು. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಗ್ರಾಮದ ಜನರಿಗೆ ಧೈರ್ಯ ತುಂಬಿದರುಇಂಡಿಗನತ್ತ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಟ್ಯಾಂಕರ್‍ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದ್ದು, ಇದುವರೆಗೆ 48 ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗಿದೆ. ಕೆಟ್ಟಿದ್ದ ಮೂರು ಬೋರ್‍ವೆಲ್‍ಗಳನ್ನು ದುರಸ್ಥಿಪಡಿಸಿ ನೀರಿನ ಪೈಪ್‍ಗಳನ್ನು ಅಳವಡಿಸಲಾಗಿದೆ. ಜಾನುವಾರುಗಳಿಗೆ ಮೇವು ಒದಗಿಸುವ ಸಲುವಾಗಿ ಗ್ರಾಮದ ರೈತರಿಗೆ 2 ಟನ್‍ಗೂ ಹೆಚ್ಚಿನ ಮೇವು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಮತಗಟ್ಟೆ ದ್ವಂಸ ಪ್ರಕರಣದಿಂದ ಬಂಧನದ ಭೀತಿ ಎದುರಿಸಿದ ಕೆಲವರು ತಮ್ಮ ಮನೆಗಳಿಗೆ ಬೀಗ ಹಾಕಿ ತಮ್ಮ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಹಾಗೂ ವೃದ್ಧರನ್ನ ಬಿಟ್ಟುಹೋಗಿದ್ದರಿಂದ ಅಲ್ಲಿದ್ದವರು ಒಪ್ಪ್ಪೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದ ಹಿನ್ನಲೆಯಲ್ಲಿ ಇದನ್ನು ಮನಗಂಡ ಜಿಲ್ಲಾಡಳಿತವು ಮಕ್ಕಳಿಗೆ ವೃದ್ಧರಿಗೆ ಬಾಣಂತಿಯರಿಗೆ ಗರ್ಭಿಣಿಯರಿಗೆ ಆಹಾರದ ವ್ಯವಸ್ಥೆಯನ್ನು ನೀಡಲು ಮುಂದಾಗಿದೆ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮುಂದುವರೆಸಲಾಗಿದೆ. ಗರ್ಭಿಣಿಯರು, ಬಾಣಂತಿಯರಿಗೆ, ಮಕ್ಕಳಿಗೆ ಹಾಗೂ ಹಿರಿಯರಿಗೆ ಪೌಷ್ಠಿಕ ಆಹಾರ, ಹಾಲಿನ ಪುಡಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮತಗಟ್ಟೆ ದ್ವಂಸ ಸಮಯದಲ್ಲಿ ಜನರ ನೂಕುನುಗ್ಗಲು ಹಾಗೂ ಕಾಲ್ತುಳಿತದಿಂದ ಗಾಯಗೊಂಡಿದ್ದ ಗ್ರಾಮದ ಜನರಿಗೆ ಸ್ಥಳೀಯ ವೈದ್ಯಾಧಿಕಾರಿ ತಂಡವು ಇದುವರೆಗೆ ಮೂರು ಬಾರಿ ಆರೋಗ್ಯ ಶಿಬಿರ ಏರ್ಪಡಿಸಿ ತಪಾಸಣೆಯನ್ನು ಕೂಡ ನಡೆಸಿದೆ. ವಯೋವೃದ್ಧರಿಗೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕವಾಗಿ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ, ಔಷಧೋಪಚಾರ ನೀಡಲಾಗಿದ್ದು, ಜನರ ಆರೋಗ್ಯ ಸುಧಾರಣೆಗೂ ಜಿಲ್ಲಾಡಳಿತ ಗಮನ ಹರಿಸಿದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಗ್ರಾಮಸ್ಥರಿಂದ ಕುಂದುಕೊರತೆ ಆಲಿಸಿದ ಬಳಿಕ ಜಿಲ್ಲಾಧಿಕಾರಿಯವರು ಗ್ರಾಮದ ಪ್ರತಿ ಮನೆ ಮನೆಗೂ ಖುದ್ದು ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿ ಗ್ರಾಮಸ್ಥರೊಡನೆ ಸಮಾಲೋಚನೆಯನ್ನು ನಡೆಸಿದರು. ಗ್ರಾಮದಲ್ಲಿದ್ದ ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರನ್ನು ಆತ್ಮೀಯವಾಗಿ ಮಾತನಾಡಿಸಿ ಅವರ ಆರೋಗ್ಯ ಕ್ಷೇಮ ವಿಚಾರಿಸಿದರು. ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನದ ಅಂಗವಾಗಿ ಮಕ್ಕಳ ಬಾಯಿಗೆ ಜಂತುಹುಳು ಮಾತ್ರೆ ಹಾಕಿದರು. ಗ್ರಾಮದಲ್ಲಿದ್ದ ಬೋರ್‍ವೆಲ್‍ನ ನೀರನ್ನು ಸ್ವತಃ ಜಿಲ್ಲಾಧಿಕಾರಿಯವರು ಕುಡಿಯುವ ಮೂಲಕ ನೀರಿನ ಶುದ್ಧತೆಯನ್ನು ಪರಿಶೀಲಿಸಿದರು.
ಬಳಿಕ ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಲ್ಲಿನ ಸೋಲಿಗ ಸಮುದಾಯದ ಜನರನ್ನು ಮಾತನಾಡಿಸಿ ಆರೋಗ್ಯವನ್ನು ವಿಚಾರಿಸಿ ಜನತೆಯ ಸಮಸ್ಯೆ ಆಲಿಸಿದರು. ಇದೇ ವೇಳೆ ಮೆಂದಾರೆ ಗ್ರಾಮಸ್ಥರು ಪುನರ್ವಸತಿ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಗ್ರಾಮದ ಎಲ್ಲಾ ಸಮಸ್ಯೆಗಳ ಕುರಿತು ಸಂಬಂಧಪಟ್ಟ ವಿವಿಧ ಇಲಾಖೆಗಳು ಜಂಟಿಯಾಗಿ ಸಮಗ್ರ ಸಮೀಕ್ಷೆ ನಡೆಸಿ ಶೀಘ್ರವಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಸಮಸ್ಯೆ ಇತ್ಯರ್ಥಕ್ಕೆ ಕ್ರಮವಹಿಸಲಾಗುವುದು ಎಂದರು.
ಅಲ್ಲದೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಬಾರದು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಹಾಗೂ ಜನರಿಗೆ ಜಾಬ್‍ಕಾರ್ಡ್ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯು ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕು. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ನೀಡಲು ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಹನೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಪ್ರಕಾಶ್, ಡಿವೈಎಸ್‍ಪಿ ಧರ್ಮೇಂದ್ರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಕೊಳ್ಳೇಗಾಲ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೇಶವಮುರ್ತಿ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.