ಕಾರ್ಮಿಕ ದುರ್ಮರಣ, ಬೃಹತ್ ಪ್ರತಿಭಟನೆ
ಕೊಲ್ಹಾರ:ಮೇ.16: ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ ವಿದ್ಯುತ್ ಚಿಮಣಿ ಮೇಲಿಂದ ಬಿದ್ದು ಕಿಶನ್ ಕುಮಾರ್ ಭಾರದ್ವಾಜ್ ಎಂಬ ಉತ್ತರ ಪ್ರದೇಶ ಮೂಲದ ಕಾರ್ಮಿಕ ದುರ್ಮರಣ ಹೊಂದಿದ ಹಿನ್ನೆಲೆ ಉಷ್ಣ ವಿದ್ಯುತ್ ಸ್ಥಾವರದ ಮುಂಬಾಗ ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಬುಧವಾರ ಕಾರ್ಮಿಕರು ಎನ್.ಟಿ.ಪಿ.ಸಿ ಮುಂಬಾಗ ಕರ್ತವ್ಯಕ್ಕೆ ಹಾಜರಾಗದೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು, ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅನೇಕ ಬಾರಿ ಇಂತಹ ದುರ್ಘಟನೆಗಳು ಜರುಗುತ್ತಿವೆ. ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಸ್ಥಾವರದ ಅಧಿಕಾರಿಗಳು ಕಾರ್ಮಿಕರ ರಕ್ಷಣೆಗಾಗಿ ಮುಂಜಾಗೃತವಾಗಿ ಕ್ರಮವಾಗಿ ಅನುಸರಿಸಬೇಕ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರ್ಮಿಕರೊಂದಿಗೆ ಸ್ಥಾವರದ ಅಧಿಕಾರಿಗಳು ಸಂಧಾನಕ್ಕೆ ಯತ್ನಿಸಿದ ಸಂದರ್ಭ ಕಾರ್ಮಿಕರು ತೀರ್ವ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಕಾರ್ಮಿಕನಿಗೆ ಎನ್.ಟಿ.ಪಿ.ಸಿ ಹಾಗೂ ಗುತ್ತಿಗೆ ಪಡೆದ ಕಂಪನಿ ಸೂಕ್ತ ಪರಿಹಾರ ಕಲ್ಪಿಸಬೇಕು, ಮುಂದೆ ಈ ರೀತಿಯ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಶರತ್ತು ವಿಧಿಸಿದರು ಅಧಿಕಾರಿಗಳು ಶರತ್ತಿಗೆ ಒಪ್ಪಿದ ನಂತರ ಕಾರ್ಮಿಕರು ಪ್ರತಿಭಟನೆ ಹಿಂಪಡೆದುಕೊಂಡರು.