ಬೆಳೆಹಾನಿ ಪರಿಹಾರ ತಾರತಮ್ಯ ಖಂಡಿಸಿ ರೈತರ ಮನವಿ
ಅಥಣಿ:ಮೇ.15: ರಾಜ್ಯ ಸರ್ಕಾರ ಅಥಣಿ ಮತ್ತು ಕಾಗವಾಡ ಸೇರಿದಂತೆ ಅನೇಕ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಈಗ ಬೆಳೆ ಹಾನಿ ಪರಿಹಾರವನ್ನು ಕೆಲವೇ ಕೆಲವು ರೈತರಿಗೆ ನೀಡಿ ಇನ್ನುಳಿದ ರೈತರಿಗೆ ಅನ್ಯಾಯ ಮಾಡುತ್ತಿದೆ. ಬೆಳೆಹಾನಿ ಪರಿಹಾರದಲ್ಲಿ ಆಗುತ್ತಿರುವ ಅನ್ಯಾಯ ಮತ್ತು ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಒತ್ತಾಯಿಸಿದ್ದಾರೆ.
ಅವರು ಮಂಗಳವಾರ ಇಲ್ಲಿನ ಕೃಷಿ ಇಲಾಖೆಯ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೆಳೆ ಪರಿಹಾರದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಿ ಎಲ್ಲ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನ ಒತ್ತಾಯಿಸಿ ಕೃಷಿ ಇಲಾಖೆ ಅಧಿಕಾರಿ ನಿಂಗನಗೌಡ ಬಿರಾದಾರ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಅಲ್ಪಸ್ವಲ್ಪ ಆಗಿರುವ ಮಳೆಯನ್ನ ನಂಬಿ ಅನೇಕ ರೈತರು ರೈತರು ಬಿತ್ತನೆ ಕಾರ್ಯ ಮಾಡಿದ್ದರು. ಆದರೆ ಒಣ ಬೇಸಾಯದ ಪ್ರದೇಶದಲ್ಲಿ ಮಳೆ ಇಲ್ಲದೆ ತೇವಾಂಶದ ಕೊರತೆಯಿಂದ ಬೆಳೆಗಳು ಮೊಳಕೆಯ ಸ್ಥಿತಿಯಲ್ಲಿಯೇ ಕಮರಿ ಹೋದವು. ಕೃಷ್ಣಾ ನದಿ ತೀರದ ಅನೇಕ ಗ್ರಾಮಗಳಲ್ಲಿ ಸಕಾಲಕ್ಕೆ ವಿದ್ಯುತ್ ಪೂರೈಸದ ಕಾರಣ ಅನೇಕ ಕಬ್ಬಿನ ಬೆಳೆಗಳಿಗೆ ನೀರು ಒದಗಿಸಲಾಗದೆ ಕಬ್ಬಿನ ಬೆಳೆಗಳು ಕೂಡ ಒಣಗಿವೆ. ಈ ಬಗ್ಗೆ ಸರಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ದೃಢೀಕರಣ ಮಾಡಬೇಕಾದ ಅಧಿಕಾರಿಗಳು ಮೂರು ತಿಂಗಳ ನಂತರ ಸಮೀಕ್ಷೆ ನಡೆಸಿ ರೈತರ ಜಮೀನುಗಳಲ್ಲಿ ಬೆಳೆ ಇಲ್ಲ ಎಂಬ ತಪ್ಪು ವರದಿಯನ್ನು ನೀಡಿದ್ದೇ ಈಗ ಪರಿಹಾರ ನೀಡುವಲ್ಲಿ ತಾರತಮ್ಯ ಆಗುತ್ತಿದೆ. ಕೃಷಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಕೂಡಲೇ ಇದನ್ನ ಸರಿಪಡಿಸಿ ಒಣ ಬೇಸಾಯ ಮತ್ತು ನೀರಾವರಿ ಪ್ರದೇಶದ ಎಲ್ಲಾ ರೈತರಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಈಗಾಗಲೇ ನಾವು ಅನೇಕ ಬಾರಿ ಮನವಿ ನೀಡಿದ್ದೇವೆ. ಆದರೆ ಸರ್ಕಾರ ಈ ಬಗ್ಗೆ ಆಸಕ್ತಿವಹಿಸಿ ನೀರು ತರಿಸುವ ಪ್ರಯತ್ನ ಮಾಡುತ್ತಿಲ್ಲ. ಆದ್ದರಿಂದ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿಯಿಂದ ಜನಜಾನುವಾರುಗಳಿಗೆ ನೀರಿಲ್ಲ, ತೋಟದ ವಸತಿಗಳಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಕಾಲಕ್ಕೆ ನೀರು ಒದಗಿಸುತ್ತಿಲ್ಲ, ಬೆಳೆ ಹಾನಿ ಪರಿಹಾರ ಇಲ್ಲ. ಎಲ್ಲ ರಾಜ್ಯಗಳಿಗೂ ಪರಿಹಾರಧನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದ ರೈತರನ್ನು ಕಡೆಗಣಿಸಿದ್ದರು. ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ ಕೇಂದ್ರ ಸರ್ಕಾರ ಪರಿಹಾರ ನೀಡಿತು. ಇದೀಗ ರಾಜ್ಯ ಸರ್ಕಾರವು ಈ ಪರಿಹಾರ ಧನವನ್ನ ಎಲ್ಲಾ ರೈತರಿಗೆ ಸಮನಾಗಿ ಹಂಚದೇ ಅನ್ಯಾಯ ಮಾಡುತ್ತಿದೆ. ಅಥಣಿ ಮತ್ತು ಕಾಗವಾಡ ತಾಲೂಕುಗಳಲ್ಲಿ ಕೇವಲ ಶೇಕಡ 20ರಷ್ಟು ರೈತರಿಗೆ ಮಾತ್ರ ಪರಿಹಾರಧನ ಬಂದಿರುತ್ತದೆ. ಇನ್ನುಳಿದ ಶೇ.80 80ರಷ್ಟು ರೈತರಿಗೆ ಅನ್ಯಾಯವಾಗಿದ್ದು ಸರ್ಕಾರ ಅದನ್ನು ಬೇಗನೆ ಸರಿಪಡಿಸಬೇಕೆಂದು ಅಗ್ರಹಿಸಿದರು.
” ರೈತರಲ್ಲಿ ಒಗ್ಗಟ್ಟಿಲ್ಲದ ಕಾರಣ ಸರ್ಕಾರಗಳು ನಮ್ಮ ಜೊತೆ ಚೆಲ್ಲಾಟ ನಡೆಸುತ್ತಿವೆ. ಆದ್ದರಿಂದ ನಮ್ಮ ರೈತರು ಜಾಗೃತರಾಗಬೇಕು, ರೈತ ಕುಲಕ್ಕೆ ಅನ್ಯಾಯವಾದಾಗ ಪ್ರತಿಭಟಿಸಲು ಸಿದ್ದರಾಗಬೇಕು. “