ಹಿಂದುಗಳ ಮೇಲೆ ನಿರಂತರ ಹಲ್ಲೆ: ಠಾಕೂರ್ ಖಂಡನೆ
ಬೀದರ್:ಮೇ.15: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಾದ್ಯಂತ ಹಿಂದುಗಳ ಮೇಲೆ ಹಲ್ಲೆ, ಹತ್ಯೆ, ದಾಂಧಲೆ, ದಾಳಿಗಳು ನಿತ್ಯ ನಿರಂತರವಾಗಿ ಮುಂದುವರೆದಿದ್ದು, ನಾವು ಹಿಂದುಸ್ಥನದಲ್ಲಿದ್ದೇವೊ ಅಥವಾ ತಾಲಿಬಾನಿಗಳ ಆಶ್ರಯದಲ್ಲಿದ್ದೇವೊ ಎಂಬ ಬಗ್ಗೆ ಅನುಮಾನ ಕಾಡುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ಕಲಬುರಗಿ ವಿಭಾಗಿಯ ಸಹ ಪ್ರಭಾರಿ ಈಶ್ವರ್ ಸಿಂಗ್ ಠಾಕೂರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೇಳಿಕೆ ನೀಡಿರುವ ಅವರು, ಒಂದು ಕಡೆ ಸ್ವತಃ ಸರ್ಕಾರವೇ ಬಜರಂಗದಳದ ಕಾರ್ಯಕರ್ತರ ಮೇಲೆ ಕೇಸ್ ಹಾಕಲು ಮುಂದಾದರೆ, ಇನ್ನು ಕೆಲವೊಂದು ಕಡೆ ಮುಸ್ಲಿಮ್ ಸಂಘಟನೆಗಳು ಹಿಂದುಗಳ ಹತ್ಯೆ, ಹಿಂದು ಹೆಣ್ಣು ಮಕ್ಕಳ ಹಾಡಹಗಲೆ ಕೊಲೆ, ದಲಿತ ಹಿಂದು ಯುವಕನ ಹತ್ಯೆ, ಹೀಗೆ ಒಂದಲ್ಲೊಂದು ಘಟನೆಗಳು ನಿರಂತರವಾಗಿ ನಡೆಯುತ್ತಿರುವಾಗ ಹಿಂದುಗಳು ಬದುಕುವುದಾದರೂ ಎಲ್ಲಿ? ಎಂದು ಠಾಕೂರ್ ಪ್ರಶ್ನೆ ಮಾಡಿದ್ದಾರೆ.
ಈ ಜಗತ್ತಿನಲ್ಲಿ ಹಿಂದು ರಾಷ್ಟ್ರ ಇರುವುದು ಭಾರತ ಮಾತ್ರ. ಅಂಥದರಲ್ಲಿ ನಮ್ಮ ನೆಲೆಯಲ್ಲಿಯೇ ನಮಗೆ ರಕ್ಷಣೆ ಇಲ್ಲ ಅಂದರೆ ರಾಜ್ಯ ಸರ್ಕಾರ ಏಕಿರಬೇಕು?. ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕೆಲವು ಮತಿಯ ಸಂಘಟನೆಗಳು ತಮ್ಮ ಬಾಲ ಬಿಚ್ಚಿಕೊಂಡಿದ್ದು, ದಿನಕ್ಕೊಂದು ದಾಂಧಲೆಯಲ್ಲಿ ತೊಡಗಿವೆ. ರಾಜ್ಯ ಸರ್ಕಾರ ಮಾತ್ರ ದಿವ್ಯ ಮೌನ ವಹಿಸುವ ಮೂಲಕ ಇಂತಹ ಘಟನಾವಳಿಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ನೇಹಾ ಹಿರೇಮಠರ ಕೊಲೆ ಮಾಸುವಷ್ಟರಲ್ಲಿ ಯಾದಗಿರಿಯಲ್ಲಿ ದಲಿತ ಹಿಂದು ಯುವಕನ ಕೊಲೆ, ಅದು ಮುಗಿಯುತ್ತಿದ್ದಂತೆ ಇತ್ತಿಚೀಗೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಮಡಿವಾಳ ಸಮಾಜದ ಅರ್ಜುನಪ್ಪ ಮಡಿವಾಳ ಎಂಬ ಯುವಕನನ್ನು ಕೂಡಿಹಾಕಿ ವಿವಸ್ತ್ರಗೊಳಿಸಿ ಆತನ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡುವ ಮೂಲಕ ರಾಕ್ಷಸಿ ಕೃತ್ಯ ಎಸಗಿರುವವರ ವಿರೂದ್ಧ ಅಲ್ಲಿಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿರುವುದು ನಾಚಿಕೆಗೀಡಿನ ಸಂಗತಿಯಾಗಿದೆ ಎಂದು ಆಪಾದಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಇದನ್ನು ಸುಧಾರಿಸಲು ಈ ಬೇಜವಾಬ್ದಾರಿ ತಾಲಿಬಾನಿ ಮಾದರಿ ಸರ್ಕಾರವನ್ನು ಕಿತ್ತೆಸೆದು ರಾಜ್ಯದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುವುದಾಗಿ ಠಾಕೂರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.