ಇಂಧನ ಉಳಿತಾಯ ಇಂದಿನ ತುರ್ತು ಅವಶ್ಯಕತೆ : ರಮೇಶ ಪಾಟೀಲ
ಬೀದರ:ಮೇ.15 : ಪ್ರಸ್ತುತ ದಿನಗಳಲ್ಲಿ ತಾಪಮಾನವು ಜಾಗತಿಕ ಮಟ್ಟದ್ದಲ್ಲಿ ಏರಿದ್ದು, ಇಂಧನ ಉಳಿತಾಯ ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ಜೆಸ್ಕಾಂನ ಕಾರ್ಯಪಾಲಕ ಅಭಿಯಂತರರಾದ ರಮೇಶ ಪಾಟೀಲ ಹೇಳಿದರು.
ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪಂಪ್/ಉಪಕರಣಗಳ ತಂತ್ರಜ್ಞರು ಮತ್ತು ವಿದ್ಯಾರ್ಥಿಗಳಿಗಾಗಿ ಬ್ಯುರೋ ಆಫ್ ಎನರ್ಜಿ ಎಫಿಷಿಯೆನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಇವರ ಸಹಯೋಗದಲ್ಲಿ ಏರ್ಪಡಿಸಲಾದ ಇಂಧನ ದಕ್ಷತಾ ಕ್ರಮಗಳ ತಾಂತ್ರಿಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಬೀದರ ಜಿಲ್ಲೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ 480 ಮೆ.ವ್ಯಾ. ವಿದ್ಯುತ್ ಅನ್ನು ಉತ್ಪಾದನೆ ಮಾಡುತ್ತಿದ್ದು, ಬೀದರ ಜಿಲ್ಲೆಯು ನಂ.1 ಸ್ಥಾನದಲ್ಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಮಲ್ ಸೋಲಾರನ ಮುಖ್ಯಸ್ಥರಾದ ಮಲ್ಲಿಕಾರ್ಜುನ ಜೀವಣಗಿ ಅವರು ಮಾತನಾಡಿ, ಸೋಲಾರ್ ಬಳಕೆಯಿಂದ ವಿದ್ಯುತ್ ಉಳಿತಾಯವಾಗುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸರ್ಕಾರಿ ಪಾಲಿಟೆಕ್ನಿಕ್ ಕಲಬುರಗಿಯ ಮಚ್ಛೇಂದ್ರ ಎಸ್. ಅವರು ಮಾತನಾಡಿ, ಆಧುನಿಕ ಜೀವನ ಪದ್ದತಿಯು ಸಂಪೂರ್ಣವಾಗಿ ವಿದ್ಯುತ್ ಮೇಲೆ ಅವಲಂಬಿತವಾಗಿದೆ, ಪ್ರಸ್ತುತ ಜಗತ್ತಿನ ವಿದ್ಯುಚ್ಛಕ್ತಿ ಬೇಡಿಕೆಯ 61.5% ರಷ್ಟನ್ನು ಪಳೆಯುಳಿಕೆ ಇಂಧನಗಳು ಪೂರೈಸುತ್ತಿವೆ, ಉಳಿದ ವಿದ್ಯುತ್ ಅನ್ನು ಜಲ, ಪವನ, ಸೌರ, ಪರಮಾಣು ಮೂಲಗಳಿಂದ ಪಡೆಯಲಾಗುತ್ತಿದೆ, ಜಲವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪಡೆಯಲು ಅಪಾರ ಪ್ರಮಾಣದ ಅರಣ್ಯನಾಶ ಹಾಗೂ ಭೂಮಿ ಮುಳುಗಡೆಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಹಾಗಾಗಿ ನವೀಕರಿಸಬಹುದಾದ ವಿದ್ಯುತ್ ಮೂಲಗಳೇ ಇಂದಿನ ಅವಶ್ಯಕತೆಗಳಾಗಿವೆ ಎಂದರು.
ಕಾರ್ಯಾಗಾರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಬೀದರನ ಜಾಕೀರ್ ಹುಸೇನ್, ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜಿನ ಡಾ.ನೀಲಶೆಟ್ಟಿ ಕೆ., ಮತ್ತು ಭವಾನಿ ಇಂಡಸ್ಟ್ರೀಜ್‍ನ ರಾಜು ಬೆಮಲಖೇಡಕರ್ ಅವರು ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಬಕ್ಕಪ್ಪ ನಿರ್ಣಾಕರ ಸ್ವಾಗತಿಸಿದರು, ಅರುಣ ಮೊಕಾಶಿ ನಿರೂಪಿಸಿದರೆ ಸದಾಶಿವಪ್ಪ ಬಿರಾದಾರ ವಂದಿಸಿದರು. ಅಮಿತ್ ಜನವಾಡಕರ್ ಅವರು ಗೀತಗಾಯನ ನಡೆಸಿಕೊಟ್ಟರು.
ಸಮಾರೋಪ : ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆಯವರು ಮಾತನಾಡಿ, ಪ್ರತಿಯೊಬ್ಬರೂ ಸೋಲಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಉಳಿತಾಯ ಮಾಡಬೇಕೆಂದರು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ದೇವೇಂದ್ರಪ್ಪ ಹಂಚೆಯವರು ಮಾತನಾಡಿ, ತರಬೇತಿಗಳಲ್ಲಿ ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರ ಪಡೆಯಲು ಮಾತ್ರ ಭಾಗವಹಿಸಿದೇ ಜ್ಞಾನಾರ್ಜನೆಗಾಗಿ ಭಾಗವಹಿಸಿಬೇಕೆಂದರು. ಸರ್ಕಾರಿ ಪಾಲಿಟೆಕ್ನಿಕ್‍ನ ಕುಲಸಚಿವರಾದ ಶೇಖ್ ಸಿರಾಜುದ್ದೀನ್ ಮತ್ತು ವಿಜಯಕುಮಾರ ಜಾಧವ ಅವರು ಮಾತನಾಡಿದರು. ವಕೀಲ್ ಎಂ.ಪಟೇಲ್ ನಿರೂಪಿಸಿದರು, ಶಿವಕುಮಾರ ಕಟ್ಟೆ ಸ್ವಾಗತಿಸಿದರು, ಗೀತಾ ಪಾಟೀಲ ವಂದಿಸಿದರು. 100 ಜನ ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.