ಜಾಗತಿಕ ಕುಟುಂಬ ವ್ಯವಸ್ಥೆಯ ಪರಿಕಲ್ಪನೆ ಬೆಳೆಯಲಿ
ಕಲಬುರಗಿ:ಮೇ.15: ಕುಟುಂಬವು ಸಮಾಜದ ಪ್ರಮುಖ ಘಟಕವಾಗಿದ್ದು, ಪ್ರೀತಿ, ಪ್ರೇಮ, ಬಾಂಧವ್ಯ, ಸಂಬಂಧದ ಬೆಸುಗೆಯಾಗಿದೆ. ಇಂದು ಕಾರಣಾಂತರಗಳಿಂದ ವಿಭಜನೆಯಾಗಿ, ವಿಭಕ್ತ ಕುಟುಂಬಗಳೇ ವ್ಯಾಪಕವಾಗಿ ಕಂಡುಬರುತ್ತಿವೆ. ವಿಶ್ವದಲ್ಲಿರುವ ಎಲ್ಲರು ಒಂದೇ ಕುಟುಂಬದ ಸದಸ್ಯರು, ನಾವೆಲ್ಲರು ಒಂದೇ ಎಂಬ ಜಾಗತಿಕ ಕುಟುಂಬ ವ್ಯವಸ್ಥೆಯ ಪರಿಕಲ್ಪನೆ ಬೆಳೆದರೆ ವಿಶ್ವದೆಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಚಿಂತಕ ಬಸಯ್ಯಸ್ವಾಮಿ ಹೊದಲೂರ ಆಶಯ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಸೇವಕ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ ಮಾತನಾಡಿ, ‘ಕುಟುಂಬ’ ಎಂದರೆ ಬಾಂಧವ್ಯದ ಸಾಗರ, ವ್ಯಕ್ತಿತ್ವ ನಿರ್ಮಾಣದ ಕೇಂದ್ರ, ಪ್ರೀತಿಯ ಸಮುದ್ರವಾಗಿದೆ. ಕುಟುಂಬದಲ್ಲಿರುವ ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಸಹಕಾರ, ಮನೋಭಾವದಿಂದ ಜೀವಿಸಿ, ಶಾಂತಿಯುತ, ಆದರ್ಶ ಕುಟುಂಬವಾಗಬೇಕು. ಯಾವುದೇ ಕಾರಣಕ್ಕೂ ಬಾಂಧ್ಯವ್ಯದ ಬೆಸುಗೆಯಾದ ಕೌಟುಂಬಿಕ ವ್ಯವಸ್ಥೆ ಹಾಳಾಗಬಾರದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಪ್ರಮುಖರಾದ ದೀಪಕ ದೇಶಮುಖ, ಜಮೀರ ಶೇಖ್, ಪ್ರಿಯಾಂಕಾ ಮುಕರಂಬಿ ಹಾಗೂ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.