ಪುನರಾರಂಭವಾದ ರೈಲ್ವೇ ಮೇಲ್ಸೇತುವೆ ಕಾಮಗಾರಿ
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.15: : ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸ್ಥಗಿತಗೊಂಡಿದ್ದ ಹೊಸಪೇಟೆ–ಹಂಪಿ–ಕಮಲಾಪುರ ಸಂಪರ್ಕ ರಸ್ತೆಯ ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಂಗಳವಾರದಿಂದ ಕೊನೆಗೂ ಆರಂಭವಾಗಿದೆ.
ಸೇತುವೆ ನಿರ್ಮಾಣ ಕಾಮಗಾರಿ ಕೊನೆಗೊಳ್ಳಲು ಸುಮಾರು ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಬಸ್‌ ಸಹಿತ ಬೃಹತ್ ವಾಹನಗಳು ಕಮಲಾಪುರ–ಪಿ.ಕೆ.ಹಳ್ಳಿ–ಕಾರಿಗನೂರು ಮೂಲಕ ಹೊಸಪೇಟೆಗೆ ಸಂಚರಿಸಬೇಕಾಗುತ್ತದೆ. ಕಮಲಾಪುರದ ಅಂಬೇಡ್ಕರ್ ವೃತ್ತದಲ್ಲಿ ಹೊಸಪೇಟೆಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಲಾಗಿದ್ದು, ಎಲ್ಲಾ ಭಾರಿ ವಾಹನಗಳನ್ನು ಬದಲಿ ಮಾರ್ಗದಲ್ಲಿ ಕಳುಹಿಸಲಾಗುತ್ತಿದೆ. 12 ಮೀಟರ್ ಅಗಲದ ಸೇತುವೆ: ‘ಮೇಲ್ಸೇತುವೆಯ ಅಗಲ 12 ಮೀಟರ್ ಇರುತ್ತದೆ. ಹೈದರಾಬಾದ್‌ನ ಕಂಪನಿಯೊಂದು ನಿರ್ಮಾಣದ ಗುತ್ತಿಗೆ ಪಡೆದಿದೆ. 140 ಕೋಟಿ ವೆಚ್ಚದ ಈ ಯೋಜನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೇ 50ರಷ್ಟು ವೆಚ್ಚ ಭರಿಸುತ್ತಿವೆ. ರೈಲ್ವೆ ಇಲಾಖೆಯೇ ಸೇತುವೆ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ’ ಎಂದು ರೈಲ್ವೆ ಇಲಾಖೆಯ ಎಂಜಿನಿಯರ್‌ ಸುಧಾಕರ್ ತಿಳಿಸಿದರು.
ಪರಿಹಾರ ಮಾತುಕತೆ: ರೈಲ್ವೆ ಮೇಲ್ಸೇತುವೆ ಕಾಮಗಾರಿಗಾಗಿ ಹಂಪಿ ಬದಿಯಲ್ಲಿ ಅನಂತಶಯನಗುಡಿಯ ಸುಮಾರು 52 ಮಂದಿಗೆ ಪರಿಹಾರ ನೀಡಬೇಕಾಗುತ್ತದೆ. ಅಂದಾಜು 1.30 ಕೋಟಿ ಪರಿಹಾರ ರೂಪದಲ್ಲಿ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮಟ್ಟದಲ್ಲಿ ಸಭೆಗಳು ನಡೆದಿದ್ದು, ಪರಿಹಾರ ಪಾವತಿ ವಿಚಾರದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಸುಮಾರು ಎರಡು ವರ್ಷಗಳ ಹಿಂದೆ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ, ಹೊಸಪೇಟೆ ಕಡೆಯಿಂದ ಪಿಲ್ಲರ್‌ ನಿರ್ಮಾಣ ಕಾರ್ಯವೂ ಶುರುವಾಗಿತ್ತು. ಆದರೆ ವಿಧಾನಸಭಾ ಚುನಾವಣೆ, ಬಳಿಕ ಬಂದ ಫಲಿತಾಂಶ ಹಾಗೂ ಇತರ ಕಾರಣಗಳಿಂದಾಗಿ ಕಾಮಗಾರಿ ಅರ್ಧಕ್ಕೇ ನಿಂತಿತ್ತು. ಸುಮಾರು ಒಂದು ವರ್ಷದಿಂದ ಕಾಮಗಾರಿಗೆ ಚಾಲನೆಯೇ ಸಿಕ್ಕಿರಲಿಲ್ಲ ಹಾಗೂ ಪ್ರತಿ ಬಾರಿ ರೈಲು ಗೇಟು ಹಾಕಿದಾಗ ಸಾಲುಗಟ್ಟಿ ನಿಂತ ವಾಹನಗಳಿಂದ ಭಾರಿ ಸಮಸ್ಯೆ ಎದುರಾಗಿತ್ತು.