ಹೊಸಪೇಟೆಯ ಖಾಸಗಿ ಆಸ್ಪತ್ರೆಗಳಲ್ಲಿ ಕುಂದುಕೊರತೆ ಕುರಿತು ಸಭೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ 15: ಹೊಸಪೇಟೆ ನಗರದಲ್ಲಿನ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ನೀಡದೇ ಸಾವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯ ಸಂಘ ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧ್ಯಕ್ಷತೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಲಾಯಿತು.
ಮೇ 8ರಂದು ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಘಟನೆ ಹಾಗೂ ಸದರಿ ಘಟನೆಯ ಪರಿಣಾಮ ಮತ್ತು ಕಾನೂನು ಸುವ್ಯವಸ್ಥೆ ಪಾಲನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು.  ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಸದಸ್ಯರು, ಐಎಂಎ ಪದಾಧಿಕಾರಿಗಳು ಮತ್ತು ಸದಸ್ಯರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಇಂತಹ ಘಟನೆಗಳು ಇನ್ಮುಂದೆ ನಡೆಯದಂತೆ ನೋಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಯಿತು.
ಸರಿಯಾಗಿ ಚಿಕಿತ್ಸೆ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ಸಾವುಗಳು ಸಂಭವಿಸುತ್ತ್ತಿವೆ ಎನ್ನುವ ದೂರಿನ ಬಗ್ಗೆ ಖಾಸಗಿ ಆಸ್ಪತ್ರೆಗಳು ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಬರುವ ಯಾವುದೇ ರೋಗಿಗಳು ಮತ್ತು ಆ ರೋಗಿಯ ಸಂಬಂಧಿಕರೊಂದಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯು ಸಹನೆ, ಸಂಯಮ ಮತ್ತು ತಾಳ್ಮೆಯಿಂದ ನಡೆದುಕೊಳ್ಳಬೇಕು. ದುರ್ವರ್ತನೆ ತೋರಬಾರದು. ಮಾನವೀಯತೆಯಿಂದ ನಡೆದುಕೊಳ್ಳಬೇಕು. ಲೋಪ ಎಸಗಿರುವುದು ಕಂಡುಬಂದಲ್ಲಿ ಯಾರೇ ಆಗಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ, ವೈದ್ಯರನ್ನು ದೇವರ ಸಮಾನ ಎಂದು ನಮ್ಮ ಸಮಾಜವು ವೈದ್ಯರಿಗೆ ಗೌರವಯುತ ಸ್ಥಾನ ನೀಡಿದೆ. ಕೆಲವು ವೈದ್ಯರು ಮತ್ತು ಅವರ ಆಸ್ಪತ್ರೆಗಳಲ್ಲಿನ ಸಿಬ್ಬಂದಿ ತೋರುವ ನಿರ್ಲಕ್ಷ್ಯದಿಂದಾಗಿ ಸಾವುಗಳು ಸಂಭವಿಸಿ ಇಡೀ ವೈದ್ಯ ಸಮೂಹವನ್ನೇ ಕೆಟ್ಟ ದೃಷ್ಟಿಯಿಂದ ನೋಡುವಂತಾಗುತ್ತದೆ. ವೈದ್ಯರು ಮತ್ತು ಸಾರ್ವಜನಿಕ ಮಧ್ಯೆ ಇರುವ ನಂಬಿಕೆಗೆ ಧಕ್ಕೆ ಬಾರದ ಹಾಗೆ ಮತ್ತು ಸಾರ್ವಜನಿಕರಿಗೆ ವೈದ್ಯರ ಮೇಲೆ ವಿಶ್ವಾಸ ಬರುವ ಹಾಗೆ ಎಲ್ಲಾ ವೈದ್ಯರು ಮತ್ತು ಆಯಾ ಆಸ್ಪತ್ರೆಗಳಲ್ಲಿನ ಸಿಬ್ಬಂದಿಯು ಪ್ರಾಮಾಣಿಕಯಿಂದ, ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲದ ಹಾಗೆ ದೂರುಗಳು ಬಾರದ ಹಾಗೆ ಕಾರ್ಯನಿರ್ವಹಿಸಬೇಕು ಎಂದರು.
ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯನುಸಾರವೇ ಇರಬೇಕು. ನೋಂದಣಿ ಸಮಯದಲ್ಲಿ ಯಾವ ವೈದ್ಯರು ಮತ್ತು ಯಾವ ಸಿಬ್ಬಂದಿಯನ್ನು ಡಿಕ್ಲೆರೇಷನ್ ಮಾಡಲಾಗಿರುತ್ತದವೊ ಅದೇ ರೀತಿಯ ವೈದ್ಯರು ಮತ್ತು ಅವಶ್ಯಕ ಸಿಬ್ಬಂದಿಯನ್ನು ಆಸ್ಪತ್ರೆಯು ಹೊಂದಿರಬೇಕು. ಇಲ್ಲದಿದ್ದರೆ ಪರವಾನಿಗೆ ರದ್ದುಪಡಿಸಲಾಗುವುದು. ಯಾವುದೇ ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿರುವುದು ಗೊತ್ತಾದಲ್ಲಿ ಅಂತಹ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಆಸ್ಪತ್ರೆಯಲ್ಲಿನ ಬಯೋಮೆಡಿಕಲ್ ತ್ಯಾಜ್ಯವನ್ನು ನಿಯಮಾನುಸಾರ ವಿಲೆಗೆ ಕ್ರಮವಹಿಸದಿದ್ದಲ್ಲಿ ಸಹ ಕ್ರಿಮಿನಲ್ ಮೊಕದ್ದಮೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಇದೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೊಸಪೇಟೆಯಲ್ಲಿನ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಮತ್ತು ನರ್ಸಿಂಗ್ ಹೋಂ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಖಾಸಗಿ ಆಸ್ಪತ್ರೆಯ ಎಲ್ಲಾ ಕೋಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರವನ್ನು ಪ್ರದರ್ಶಿಸಿ ಅದೇ ರೀತಿ ಪಾಲನೆ ಮಾಡಬೇಕು. ನಿಗದಿಪಡಿಸಿದ ದರಕ್ಕಿಂತ ಅನವಶ್ಯಕವಾಗಿ ಹೆಚ್ಚಿನ ಹಣ ಪಡೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಅಪ್ರಾಪ್ತ ವಯಸ್ಸಿನ ಮಹಿಳೆಯು ಗರ್ಭಿಣಿ ಎಂದು ಗೊತ್ತಾದಲ್ಲಿ ಈ ಬಗ್ಗೆ ಕೂಡಲೇ 1098 ಅಥವಾ ಆರೋಗ್ಯ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರಯ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ ಮತ್ತು ವೇತನದ ವಿವರಗಳನ್ನು ಪರಿಶೀಲಿಸಲು ತಾಲೂಕುಮಟ್ಟದ ತಂಡಗಳನ್ನು ರಚಿಸಿ ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಸಹ ಸಭೆಯಲ್ಲಿ ಸೂಚಿಸಲಾಯಿತು.  ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಐಎಂಎ ಅಧ್ಯಕ್ಷರಾದ ಡಾ.ಶ್ರೀನಿವಾಸ ದೇಶಪಾಂಡೆ ಹಾಗೂ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಎಲ್ಲ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.