ಪೆನ್ ಡ್ರೈವ್ ಪ್ರಕರಣ:ಆರೋಪಿ ಬಂಧನಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.15: ಹಾಸನದಲ್ಲಿ ಸಂಸದರು ನೂರಾರು ಹೆಣ್ಣುಮಕ್ಕಳ ಮೇಲೆ ಅತ್ಯಂತ ವಿಕೃತ ರೀತಿಯಲ್ಲಿ ದೌರ್ಜನ್ಯ ಎಸಗಿರುವುದು ವಿಷಾದನೀಯ. ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಹೆಣ್ಣುಮಕ್ಕಳಿಗೆ ರಕ್ಷಣೆ ಹಾಗೂ ನ್ಯಾಯವನ್ನು ಆಗ್ರಹಿಸಿ ಹಾಗೂ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ, ದಿನಾಂಕ 14.05.2024 ರಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸಮಿತಿಯು ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಹಾಲ್‍ನಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಸಂಘಟಿಸಿತು. ಹಾಸನದ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ತನಿಖೆಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು, ಸಂತ್ರಸ್ತೆಯರಿಗೆ  ಆಪ್ತ ಸಮಾಲೋಚಕರನ್ನು ನೇಮಿಸಿ ಅಗತ್ಯ ವೈದ್ಯಕೀಯ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಮಾಡಬೇಕು, ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಭದ್ರತೆ ಖಾತ್ರಿ ಪಡಿಸಬೇಕು, ದೌರ್ಜನ್ಯದ ದೃಶ್ಯಗಳನ್ನೊಳಗೊಂಡ ಪೆನ್‍ಡ್ರೈವ್‍ಗಳನ್ನು ಹಾಸನದ ಹಾದಿಬೀದಿಗಳಲ್ಲಿ ಬಿಸಾಡಿದವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂಬ ಹಕ್ಕೊತ್ತಾಯಗಳನ್ನು ಸಮಾವೇಶವು ಮಂಡಿಸಿತು.
ಸಮಾವೇಶಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕರ್ನಾಟಕದ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಸಿ.ಎಚ್.ಹನುಮಂತರಾಯರವರು ನ್ಯಾಯಾಲಯದ ವಿವಿಧ ಸೆಕ್ಷನ್‍ಗಳನ್ನು ಉಲ್ಲೇಖಿಸುತ್ತಾ, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಹಾಕಲು 41 ಸೆಕ್ಷನ್‍ಗಳಿದ್ದು, ಮಹಿಳೆಯರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇವಲ 24 ಸೆಕ್ಷನ್‍ಗಳಷ್ಟೇ ಇರುವುದಾಗಿ ತಿಳಿಸುತ್ತಾ, ಕಾನೂನಿನಲ್ಲಿರುವ ಲೋಪವನ್ನು ಪ್ರಶ್ನಿಸಿದರು. ಈ ಪ್ರಕರಣದ ಆರೋಪಿಗಳು ಸಾಕಷ್ಟು ಬಲಶಾಲಿಗಳಾಗಿದ್ದು, ಸಾಕ್ಷಿಗಳನ್ನು ತಿರುಚುವ, ಅಳಿಸಿಹಾಕುವ ಎಲ್ಲಾ ಸಾಧ್ಯತೆಗಳೂ ಇವೆ, ಈ ಪ್ರಕರಣವು ಹಲವಾರು ಮಗ್ಗಲುಗಳನ್ನು, ಆಯಾಮಗಳನ್ನು ಹೊಂದಿದೆ 
ಈ ಪ್ರಕರಣದ ಆರೋಪಿಗಳಾಗಿರುವ ತಂದೆ ಮಗನ ಅಪರಾಧಗಳನ್ನು ನಿರೂಪಿಸುವಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರೆಡೂ ಜವಾಬ್ದಾರರೆಂಬುದನ್ನು ಸ್ಪಷ್ಟಪಡಿಸಿದರು. ಆರೋಪಿಗಳಾದ ರೇವಣ್ಣನವರನ್ನು ಮ್ಯಾಜಿಸ್ಟ್ರೇಟರ ಮುಂದೆ ನಿಲ್ಲಿಸಿದಾಗ ನೀಡುವ ಸ್ಪಷ್ಠೀಕರಣವು ನಿಜವಾದದ್ದಾಗಿರುತ್ತದೆ. ನಂತರದ ಸ್ಪಷ್ಟೀಕರಣಗಳು ಅವರ ವಕೀಲರ ಮಾತುಗಳಾಗಿರುತ್ತವೆ ಎಂದು ತಿಳಿಸುತ್ತಾ, ಅದೇ ರೀತಿಯಲ್ಲಿ ತನಿಖಾ ತಂಡವು ಆಘಾತಕ್ಕೊಳಗಾದ ಸಂತ್ರಸ್ತೆಯರಿಗೆ ಅವರ ಸ್ಪಷ್ಟೀಕರಣ ನೀಡಲು ಸಾಕಷ್ಟು ಕಾಲಾವಕಾಶವನ್ನು ನೀಡಬೇಕಾಗುತ್ತದೆ ಎಂಬುದರ ಅಗತ್ಯವನ್ನು ಮನಗಾಣಬೇಕಾಗುತ್ತದೆ ಎಂದು ವಿವಿಧ ದೃಷ್ಠಾಂತಗಳೊಂದಿಗೆ ವಿವರಿಸಿದರು. ಇಂದು ಆಡಳಿತ ಪಕ್ಷಗಳು ಸರಿಯಾದ ತನಿಖೆಯನ್ನು ತೀವ್ರತಮವಾಗಿ ನಡೆಸಲು ಇಂತಹ ಚಳುವಳಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು. ಇಂದಿನ ಈ ಪ್ರಕರಣವು ವಿಭಿನ್ನವಾಗಿದ್ದು, ಸಂತ್ರಸ್ತೆಯರ ಐಡೆಂಟಿಟಿ ಬಟಾಬಯಲಾಗಿರುವುದು ಅವರ ಭವಿಷ್ಯದ ಪ್ರಶ್ನೆಯಾಗಿದೆ. ಹಾಗಾಗಿ ಸರ್ಕಾರವು ಹೊಸ ಸ್ಕೀಂವೊಂದನ್ನು ರೂಪಿಸಿ ಸಂತ್ರಸ್ತೆಯರು ಎದುರಿಸಬಹುದಾದ ಅನೇಕ ರೀತಿಯ ಸವಾಲುಗಳ ಬಗ್ಗೆ ತಿಳಿಸುತ್ತಾ, ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಮಹಿಳಾ ಸಂಘಟನೆಗಳು ಒತ್ತಾಯ ತರಬೇಕೆಂಬ ಸಲಹೆಗಳೊಂದಿಗೆ ತಮ್ಮ ಮಾತುಗಳನ್ನು ಮುಗಿಸಿದರು.
ಇನ್ನೊಬ್ಬ ಭಾಷಣಕಾರರಾದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷರಲ್ಲೊಬ್ಬರು, ಹಾಗೂ ನಿವೃತ್ತ ಪ್ಲಾಸ್ಟಿಕ್ ಸರ್ಜನ್‍ರೂ ಅಗಿರುವ ಡಾ.ಸುಧಾಕಾಮತ್‍ರವರು ಪ್ರಜ್ವಲ್ ರೇವಣ್ಣ ಕೇವಲ ಅತ್ಯಾಚಾರಿಯಲ್ಲ, ವಿಕೃತಕಾಮಿ. ಅತ್ಯಾಚಾರ  ಎಸಗುವುದಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿಟ್ಟುಕೊಂಡು ಹೆಣ್ಣುಮಕ್ಕಳನ್ನು ಬ್ಲಾಕ್‍ಮೇಲ್ ಮಾಡಲು ಬಳಸುತ್ತಿದ್ದ. ಪೆನ್‍ಡ್ರೈವ್‍ಗಳ ಮೂಲಕ ಈ ವಿಡಿಯೋಗಳು ಹಾಸನದ ಹಾದಿಬೀದಿಗಳಲ್ಲಿ ಸಿಗುವಂತಾದ್ದರಿಂದ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಮಾನ ಹರಣವಾಗಿದೆ.ಹೆಣ್ಣುಮಕ್ಕಳ ಶೀಲವನ್ನು ವೈಭವೀಕರಿಸುತ್ತಿರುವ ಈ ಸಮಾಜದಲ್ಲಿ ಅವರ ಮೇಲೆ ಅತ್ಯಾಚಾರವಾದರೆ ಅತ್ಯಾಚಾರ ಮಾಡಿದ ಪುರಷನಿಗೆ ಯಾವುದೇ ಶಿಕ್ಷೆಯಾಗದೆ ಆಕೆಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ವ್ಯಾಪಕವಾಗಿ ಹರಡುತ್ತಿರುವ ಅಶ್ಲೀಲತೆ ಮನುಷ್ಯನಲ್ಲಿರುವ ಸೂಕ್ಷ್ಮ ಸಂವೇದನೆಗಳನ್ನು  ನಾಶಗೊಳಿಸುತ್ತಿದೆ. ಇದಕ್ಕೆ ಬಲಿಯಾಗದೆ ವಿದ್ಯಾರ್ಥಿ ಯುವಜನರು ಈ ಸಮಸ್ಯೆಗಳಿಗೆ ಮೂಲಕಾರಣವಾಗಿರುವ ಕೊಳೆತ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸಿ ಹೊಸ ಸಮಾಜದ ನಿರ್ಮಾಣಕ್ಕೆ ಮುಂಬರಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ|| ನಾಗಲಕ್ಷ್ಮಿ ಚೌಧರಿ ಯವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ದೂರವಾಣಿಯ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ “ಎಐಎಂಎಸ್‍ಎಸ್ ನಡೆಸುತ್ತಿರುವ ಹೋರಾಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ಸಂತ್ರಸ್ಥೆಯರ ಪರವಾಗಿ ಎಲ್ಲಾ ಹಂತಗಳಲ್ಲು ಜೊತೆಯಿರುತ್ತೇನೆ ಎಂದು ಭರವಸೆ ನೀಡಿದರು
ಇನ್ನೊಬ್ಬ ಭಾಷಣಕಾರರಾದ ಎಐಎಂಎಸ್‍ಎಸ್‍ನ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಎಂ.ಎನ್.ಮಂಜುಳಾ ಅವರು ಮಾತನಾಡುತ್ತಾ ಹಾಸನದ ಈ ಘಟನೆ ಇಡೀ ಮನುಕುಲಕ್ಕೆ ಆದ ಅವಮಾನ. ಇಲ್ಲಿ ವಿಕೃತ ಮನಸು ಮಾತ್ರ ಅಲ್ಲದೆ ಅಧಿಕಾರದ ದರ್ಪ ರಾಜಕೀಯ ಬೆಂಬಲ ಈ ದುಷ್ಕೃತ್ಯಕ್ಕೆ ಕಾರಣವಾಗಿದೆ. ಹೆಣ್ಣು ಮಕ್ಕಳನ್ನು ಹಲವು ರೀತಿಯ ಬೆದರಿಕೆಗಳನ್ನೊಡ್ಡಿ ಈ ಕೃತ್ಯವನ್ನು ಎಸಗಲಾಗಿದೆ. ಕಾನೂನಿನಲ್ಲಿರುವ ಲೋಪ ದೋಷಗಳು ಅಪರಾಧಿಗೆ ಶಿಕ್ಷೆಯಾಗುವ ದಿಕ್ಕಿನಲ್ಲಿ ಅಡ್ಡಿಯಾಗಿತ್ತಿದೆ’ ಎಂದು ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.