ಪುತ್ತೂರು ಟೌನ್‌ಬ್ಯಾಂಕಿನಲ್ಲಿ ‘ಅವ್ಯವಹಾರ’ಪ್ರಶ್ನೆ ಮಾಡಿದರೆ ಗೂಂಡಾಗಿರಿ- ಆರ್‌ಟಿಐ ಕಾರ್ಯಕರ್ತನ ಆರೋಪ
ಪುತ್ತೂರು; ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವ ಟೌನ್ ಕೋ-ಅಪರೇಟೀವ್ ಬ್ಯಾಂಕ್‌ನ ಕಾರ್ಯಚಟುವಟಿಕೆಗಳಲ್ಲಿ ಅವ್ಯವಹಾರ ನಡೆದಿದೆ. ಈ ಅವ್ಯವಹಾರವನ್ನು ಮಹಾಸಭೆಯಲ್ಲಿ ಪ್ರಶ್ನಿಸಿದರೆ ಹಲ್ಲೆ ನಡೆಸುವ ಮೂಲಕ ಗೂಂಡಾಗಿರಿ ಪ್ರದರ್ಶಿಸುವ ಮಟ್ಟಕ್ಕೆ ಇಳಿದು ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬ್ಯಾಂಕ್‌ನ ಸದಸ್ಯ, ಆರ್.ಟಿ.ಐ ಕಾರ್ಯಕರ್ತ ಸುದರ್ಶನ್ ಪುತ್ತೂರು ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೧೦೦ ವರ್ಷಕ್ಕೂ ಹಳೆಯದಾದ ಈ ಟೌನ್‌ಬ್ಯಾಂಕ್ ಸಭಾಂಗಣವನ್ನು ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಆದರೆ ಇದರಿಂದ ಬರುವ ಹಣವನ್ನು ಬ್ಯಾಂಕಿನ ಆದಾಯದಲ್ಲಿ ತೋರಿಸುತ್ತಿಲ್ಲ. ಬೈಲಾ ತಿದ್ದುಪಡಿಮಾಡದೆ ಬ್ಯಾಂಕಿಗೆ ಸಿಇಒ ನೇಮಕ ಮಾಡಲಾಗುತ್ತಿದೆ. ಆಡಳಿತ ಮಂಡಳಿ ತಮಗೆ ಬೇಕಾದವರನ್ನು ಆಯ್ಕೆ ಮಾಡುವ ಮೂಲಕ ಸಹಕಾರ ನಿಯಮವನ್ನು ಗಾಳಿಗೆ ತೂರಿ ಲಕ್ಷಾಂತರ ರೂ ಸಂಬಳ ನೀಡಿ ನಿಯೋಜನೆ ಮಾಡಲಾಗುತ್ತದೆ. ಬ್ಯಾಂಕಿನ ಚುನಾವಣೆಯಲ್ಲಿ ಸಂಘಪರಿವಾರದವರು ಮಾತ್ರ ಸ್ಪರ್ಧಿಸುವಂತೆ ಹುನ್ನಾರ ನಡೆಸುತ್ತಿದ್ದಾರೆ. ಬ್ಯಾಂಕಿನ ಸಿಬಂಧಿ ಆಯ್ಕೆಯಲ್ಲೂ ಸಂಘಪರಿವಾರದವರನ್ನು ಮಾತ್ರ ನಿಯೋಜಿಸಿದ್ದಾರೆ. ಕೋಟ್ಯಾಂತರ ರೂ ವ್ಯವಹಾರ ನಡೆಸುವ ಮೂಲಕ ಲಕ್ಷಾಂತರ ರೂ ನಿವ್ವಳ ಲಾಭ ಪಡೆಯುತ್ತಿರುವ ಸಂಸ್ಥೆ ಈತನಕ ಒಂದೇ ಒಂದು ಶಾಖೆ ತೆರೆಯುವ ಕೆಲಸ ಮಾಡಿಲ್ಲ. ಸದಸ್ಯರಿಗೆ ಡಿವಿಡೆಂಟ್ ಏರಿಕೆ ಮಾಡುವುದಿಲ್ಲ. ಎಲ್ಲವನ್ನೂ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಕೆಲಸ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಸೆ.೨೯ರಂದು ವಿಚಾರಣೆ
ಮಹಾಸಭೆಯಲ್ಲಿ ಈ ಅವ್ಯವಹಾರದ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಲು ವಿಶ್ವನಾಥ, ನಾಗೇಶ, ಹಾಗೂ ಮತ್ತೋರ್ವ ವ್ಯಕ್ತಿ ಮುಂದಾಗುತ್ತಾರೆ. ವೇದಿಕೆಯಲ್ಲಿ ಕುಳಿತ ಆಡಳಿತ ಮಂಡಳಿಯವರು ಹೆಬ್ಬೆಟ್ಟು ತೋರಿಸಿ ಹಲ್ಲೆಗೆ ಕುಮ್ಮಕ್ಕು ಕೊಡುವ ಕೆಲಸ ಮಾಡಿದ್ದರು. ಈ ಬಗ್ಗೆ ನಗರಠಾಣೆಯಲ್ಲಿ ದೂರು ಕೊಟ್ಟ ಬಳಿಕ ಮುಚ್ಚಳಿಕೆ ಬರೆದುಕೊಡುವ ಕೆಲಸ ಆಗಿದೆ. ಬ್ಯಾಂಕಿನ ಅವ್ಯವಹಾರದ ವಿರುದ್ಧ ಈತನಕ ೮ ದೂರುಗಳನ್ನು ನೀಡಿದ್ದೇನೆ. ಈ ದೂರುಗಳ ವಿಚಾರಣೆ ಸೆ.೨೯ರಂದು ಜಿಲ್ಲಾ ಸಹಕಾರಿ ನಿಬಂಧಕರ ಮೂಲಕ ನಡೆಯಲಿದೆ. ಈ ಬ್ಯಾಂಕ್ ನಲ್ಲಿ ನಡೆಯುತ್ತಿರುವ ನಿಯಮ ಉಲ್ಲಂಘನೆ ಬಗ್ಗೆ ರಿಸರ್ವ್ ಬ್ಯಾಂಕಿಗೂ ದೂರು ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.