ಗ್ರಾಮ ದೇವತೆಗೆ ಉಡಿ ತುಂಬಿದ ಮಹಿಳೆಯರು
ಬಾದಾಮಿ, ಮೇ15: ಮಳೆಯ ಸಮೃದ್ಧತೆ ಹೆಚ್ಚಾಗಲಿ, ರೈತರ ಬದುಕಿಗೆ ಮಳೆರಾಯ ತೃಪ್ತಿಕರವಾಗಲಿ ಎಂದು ಸುಮಂಗಲೆಯರು ಬಾದಾಮಿ ಗ್ರಾಮದೇವತೆಯರಿಗೆ ಉಡಿ ತುಂಬಿ ಕಾಯಿ ಹಣ್ಣು ನೈವೇದ್ಯ ಸಲ್ಲಿಸಿದರು.
ಮಂಗಳವಾರ ಇಲ್ಲಿಯ ಗ್ರಾಮ ದೇವತೆಯರಾದ ದ್ಯಾಮವ್ವ ದುರಗವ್ವ ದೇವತೆಯರಿಗೆ ಹಾಗೂ ನಗರದ ವಿವಿಧ ದೇವತೆಗಳಿಗೆ ಮಹಿಳೆಯರು ಬೆಳಿಗ್ಗೆಯಿಂದ ಉಡಿ ತುಂಬಿ ದೇವತೆಯರಿಗೆ ಮಳೆ ಬೆಳೆ ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದರು.
ನಗರದ ಮುಖ್ಯ ರಸ್ತೆಯ ದುರಗಮ್ಮ, ಸುಂಕದ ಹನಮಪ್ಪ, ದೊಡ್ಡ ಹನಮಂತ ದೇವರು ಸೇರಿದಂತೆ ಇತರ ದೇವಾಲಯಗಳಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕಳೆದ ಎಪ್ರಿಲ್ ತಿಂಗಳಲ್ಲಿ ವಾರ ಹಿಡಿದ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಮಹಿಳೆಯರು ಮಕ್ಕಳು ನೀರು ಹಾಕುವ ಮೂಲಕ ಐದು ವಾರ ಪದ್ದತಿಯನ್ನು ಆಚರಿಸಿದ್ದರಲ್ಲದೆ ಕೊನೆಯ ಮಂಗಳವಾರ ದೇವತೆಗಳಿಗೆ ಉಡಿ ತುಂಬಿದರು.
ಈ ಸಂದರ್ಭದಲ್ಲಿ ಗ್ರಾಮ ಚವಡಿಯ ಹಿರಿಯರು ಸೇರಿದಂತೆ ಯುವಕ ಯುವತಿಯರು ಇದ್ದರು.