ರೈತರು ಬಂಡಿಗೆರೆ ಕೆರೆಗೆ ನೀರು ತುಂಬಲು ಮನವಿ ಪತ್ರ ಸಲ್ಲಿಸಿದರು :ಜಿಲ್ಲಾಧಿಕಾರಿ ಶಿಲ್ಪನಾಗ್
ಸಂಜೆವಾಣಿ ವಾರ್ತೆ
ಚಾಮರಾಜನಗರ ಮೇ.14:- ತಾಲೂಕಿನ ಬಂಡಿಗೆರೆ ಕೆರೆ ವ್ಯಾಪ್ತಿಯ ರೈತರು ಬಂಡಿಗೆರೆ ಕೆರೆಗೆ ಆದಷ್ಟು ಬೇಗ ನೀರು ತುಂಬಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪನಾಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಕೋಡಿಮೋಳೆ ಕೆರೆಯಿಂದ ಬಂಡಿಗೆರೆ ಕೆರೆ, ಚಿಕ್ಕಕೆರೆ, ದೊಡ್ಡಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಪೈಪ್‍ಲೈನ್ ಕೆಲಸ ಮುಗಿದಿದ್ದರೂ ಸಹ ಕಾಮಗಾರಿ ಪೂರ್ಣಗೊಳ್ಳದೆ ಕೆರೆಗಳಿಗೆ ನೀರು ಇಲ್ಲದಂತಾಗಿದೆ. ಈ ಯೋಜನೆಯ ಕಾಮಗಾರಿ ಕಳೆದ 5 ವರ್ಷಗಳಿಂದಲೂ ಆಮೆಗತಿಯಲ್ಲಿ ನಡೆಯುತ್ತಿದೆ. ಮಳೆ ಸಕಾಲಕ್ಕೆ ಆಗದೆ ಅಂತರ್ಜಲ ಮಟ್ಟ ತುಂಬಾ ಕಡಿಮೆಯಾಗಿದ್ದು ಕೊಳವೆ ಬಾವಿಗಳಲ್ಲೂ ಸಹ ನೀರು ಕಡಿಮೆಯಾಗಿದೆ. ಇದರಿಂದ ಕೆರೆಯ ಅಚ್ಚುಕಟ್ಟುದಾರರಿಗೆ ಬೆಳೆಗಳಿಗೆ ಹಾಗು ದನಕರುಗಳಿಗೆ ನೀರಿನ ಅಭಾವ ಉಂಟಾಗಿದ್ದು ತುಂಬಾ ಅನಾನುಕೂಲವಾಗಿದೆ.
ಜಿಲ್ಲಾಧಿಕಾರಿಗಳು ಸಂಭಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತರಾದ ಜಯಸಿಂಹ, ಹೊಸೂರು ಜಗದೀಶ್, ಮಹದೇವಸ್ವಾಮಿ(ಸೋಮೇಶ್), ನಾಗೇಂದ್ರಸ್ವಾಮಿ, ಚಂದ್ರಶೇಖರ್, ಮಹದೇವಶೆಟ್ಟಿ, ಕಾವೇರಿ ಶಿವಕುಮಾರ್, ಸಿದ್ದೇಶ್ ಇತರರು ಹಾಜರಿದ್ದರು.