ಬಸ್ಸುಗಳ ಸೌಕರ್ಯ ಒದಗಿಸಲು ಒತ್ತಾಯ
ವಿಜಯಪುರ.ಮೇ೧೫:ದೀಪದ ಕೆಳಗೆ ಕತ್ತಲು ಎಂಬಂತೆ ರಾಜ್ಯದ ರಾಜಧಾನಿಯಿಂದ ಕೇವಲ ೪೦ ಕಿಲೋಮೀಟರ್ ದೂರದಲ್ಲಿರುವ ವಿಜಯಪುರ ಹೋಬಳಿಯ ಪುರ, ಚೆಂದೇನಹಳ್ಳಿ, ಕೊಮ್ಮಸಂದ್ರ, ಏ ರಂಗನಾಥಪುರ, ಪಿ ರಂಗನಾಥಪುರ, ಸಿಎನ್ ಹೊಸೂರು ಗ್ರಾಮಗಳಿಗೆ ಯಾವುದೇ ಬಸ್ಸುಗಳ ಸಂಪರ್ಕಗಳು ಇಲ್ಲದಿದ್ದು ಕೂಡಲೇ ಕೆ ಎಸ್ ಆರ್ ಟಿ ಸಿ ಇಲ್ಲವೇ ಬಿಎಂಟಿಸಿ ಬಸ್ಗಳ ಸಂಪರ್ಕ ಒದಗಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ನೌಕರರಾದ ನಾರಾಯಣಪ್ಪ ಸರಕಾರವನ್ನು ಒತ್ತಾಯಿಸಿದ್ದಾರೆ.
ಮೇಲ್ಕಂಡ ಗ್ರಾಮಗಳ ನೂರಾರು ಮಂದಿ ಮಕ್ಕಳು ವಿಜಯಪುರ ಹಾಗೂ ಚಿಕ್ಕಬಳ್ಳಾಪುರ ದೇವನಹಳ್ಳಿ ಬೆಂಗಳೂರು ಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ತಮ್ಮ ಗ್ರಾಮಗಳಿಂದ ಯಾರಾದರೂ ಮನೆಯವರುಗಳ ಮೂಲಕ ದ್ವಿಚಕ್ರ ವಾಹನಗಳಲ್ಲಿ ವಿಜಯಪುರ ಬಸ್ ನಿಲ್ದಾಣಕ್ಕೆ ಸಂಪರ್ಕ ಪಡೆದುಕೊಂಡು ನಂತರ ವಿಜಯಪುರದಿಂದ ಬಸ್ಗಳಲ್ಲಿ ತೆರಳ ಬೇಕಾಗಿರುತ್ತದೆ ಎಂದು ಇನ್ನೂ ಕೆಲಸಕ್ಕೆ ಮತ್ತಿತರೆ ಕಾರ್ಯಕ್ಕೆ ತೆರಳುವವರು ಸಹ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದು, ಇನ್ನೂ ಸಂಜೆ ೬:೦೦ಯಾದ ನಂತರ ಬಹಳಷ್ಟು ವಿದ್ಯಾರ್ಥಿಗಳು ನಡೆದುಕೊಂಡು ತಮ್ಮ ಗ್ರಾಮಗಳಿಗೆ ಹತ್ತಾರು ಕಿ.ಮೀಗಳ ದೂರ ಹೋಗಬೇಕಾಗುತ್ತದೆ ಅದರಲ್ಲಿಯೂ ರಾತ್ರಿ ಸಂದರ್ಭದಲ್ಲಿ ಬೀದಿ ದೀಪಗಳಾಗಲಿ ಜನ ಸಂಚಾರವಾಗಲಿ ಇಲ್ಲದ ಕಾರಣ ಅಪಾಯವನ್ನು ಆಹ್ವಾನಿಸುವಂತಿರುತ್ತದೆ. ಬಹಳಷ್ಟು ಮಂದಿ ದೂರವಾಣಿ ಮೂಲಕ ದ್ವಿಚಕ್ರ ವಾಹನ ಇರುವವರು ಸಂಬಂಧಿಕರನ್ನು ಕರೆಸಿಕೊಂಡು ತಮ್ಮ ಗ್ರಾಮಗಳಿಗೆ ತೆರಳ ಬೇಕಾಗಿರುತ್ತದೆ.
ಈ ಎಲ್ಲಾ ಸಮಸ್ಯೆಗಳನ್ನು ಅರಿತುಕೊಂಡು ಸರ್ಕಾರ ಹಾಗೂ ಸಾರಿಗೆ ಇಲಾಖೆ ಈ ಕೂಡಲೇ ಮೇಲ್ಖಂಡ ಗ್ರಾಮಗಳಿಗೆ ಕನಿಷ್ಠ ಬೆಳಗ್ಗೆ ಹಾಗೂ ಸಂಜೆ ಶಾಲಾ-ಕಾಲೇಜುಗಳ ಸಂದರ್ಭದಲ್ಲಿಯಾದರೂ ಬಸ್ಸುಗಳನ್ನು ಓಡಿಸಬೇಕೆಂದು ಒತ್ತಾಯಿಸಿರುವರು.