ಅಕಾಲಿಕ ಮಳೆಯಿಂದ ಬೆಳೆ ನಾಶ: ಸೂಕ್ತ ಪರಿಹಾರಕ್ಕೆ ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.15:- ಒಂದು ಕಡೆ ಕಂಡರಿಯದ ಬರದಿಂದ ತತ್ತರಿಸಿದ್ದ ರೈತರಿಗೆ ಈಗಿನ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದಾಗಿ ಇದ್ದ ಫಸಲು ನಾಸವಾಗಿದೆ. ಹೀಗಾಗಿ ಸರ್ಕಾರ ಮಳೆಯಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ಬಾಳೆ ಮತ್ತು ಇತರೆ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ನಷ್ಟದ ಅಂದಾಜು ಸಿದ್ಧಪಡಿಸಿ ಪರಿಹಾರ ನೀಡಬೇಕು. ಇದೇ ವೇಳೆ ರಾಜ್ಯದ ರೈತರು ಸ್ವಂತ ಬಂಡವಾಳ ಹಾಗೂ ಶ್ರಮ ಹಾಕಿ ಕೃಷಿ ಪಂಪ್‍ಸೆಟ್‍ಗಳ ಮೂಲಕ ನೀರಾವರಿ ಒದಗಿಸಿಕೊಂಡು ಹಣ್ಣು ಹಂಪಲು, ತರಕಾರಿ ಮತ್ತು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಅಕ್ರಮ ಸಕ್ರಮಕ್ಕೆ ಹಾಗೂ ಹೊಸ ಸಂಪರ್ಕಕ್ಕೆ ರಾಜ್ಯ ಸರ್ಖಾರ ಈ ಸಾಲಿನಲ್ಲಿ ಹೆಚ್ಚಿಸಿರುವ ದುಬಾರಿ ಶುಲ್ಕದಿಂದಾಗಿ ರೈತರು ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಹೊಸ ಸಂಪರ್ಕಕ್ಕೆ 2.50 ಲಕ್ಷದಿಂದ ಮೂರು ಲಕ್ಷ ರೂ. ವೆಚ್ಚ ತಗಲುತ್ತಿದ್ದು, ಸರ್ಕಾರ ಈ ವೆಚ್ಚ ಕೈಬಿಟ್ಟು ಹಳೇ ಪದ್ಧತಿ ಮುಂದುವರಿಸಬೇಕು.
ಮಲೆನಾಡಿನ ಕಾಫಿ ಬೆಳೆಗಾರರ ಕೃಷಿ ಪಂಪ್‍ಸೆಟ್ ಶುಲ್ಕವನ್ನು ರೈತರೇ ಮೊದಲು ಪಾವತಿಸಬೇಕು ಹಾಗೂ ನಂತರ ಸರ್ಕಾರ ಅದನ್ನು ವಾಪಸ್ ತುಂಬಿಕೊಡುವುದಾಗಿ ಮಾಡಿರು ತೀರ್ಮಾನ ಹಿಂಪಡೆಯಬೇಕು. 10 ಎಚ್‍ವಿ ಕೃಷಿ ಪಂಪ್‍ಸೆಟ್‍ಗಳಿಗೆ ಬೇರೆಲ್ಲ ರೈತರಿಗೆ ಅನುಸರಿಸುತ್ತಿರುವ ನೀತಿಯನ್ನು ಕಾಫಿ ಬೆಳೆಗಾರರಿಗೂ ಅನ್ವಯಿಸಬೇಕೆಂದು ಆಗ್ರಹಿಸಿದರು.
ಬಳಿಕ, ಕಬ್ಬಿನ ಬಾಕಿ ಪಾವತಿಸಿ, ಎಸ್‍ಎಪಿ ಘೋಷಿಸಬೇಕು, ಕೊಬ್ಬರಿ ಖರೀದಿಯಲ್ಲಿ ಕಿರುಕುಳ ತಪ್ಪಿಸಬೇಕು, ಬರ ಪರಿಹಾರದ ಬಗ್ಗೆ ಸರ್ಕಾರ ಸ್ವತಃ ವಿಶೇಷ ಪ್ಯಾಕೇಜ್ ನೀಡಬೇಕು, ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಕೋರಿದರು.
ರಾಜ್ಯ ಕಾರ್ಯದರ್ಶಿ ಗೋಪಾಲ್ ಪಾಪೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸರವಾಜು, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ಪ್ರತಾಪ್ ಕುಮಾರ್ ಹಾಜರಿದ್ದರು.