ಸುಸ್ಥಿರ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಕೊಡುಗೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.15:- ಸ್ಥಳೀಯ ಕಾನೂನುಗಳ ಮೇಲೆ ಅಂತಾರಾಷ್ಟ್ರೀಯ ಕಾನೂನಿನ ದಟ್ಟ ಪ್ರಭಾವ ಇರುವುದನ್ನು ಕಾನೂನಿನ ಅಧ್ಯಯನದಲ್ಲಿ ತೊಡಗಿರುವ ಎಲ್ಲರೂ ಗಮನಿಸಬೇಕು ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪೆÇ್ರ.ಡೆವಿಡ್ ಅಂಬ್ರೋಸ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗ ಮತ್ತು ಕಾನೂನು ಶಾಲೆಯ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನಿನಲ್ಲಿ ಸಮಾಜಶಾಸ್ತ್ರೀಯ ಅಧ್ಯಯನ ಅತ್ಯಂತ ಪ್ರಮುಖವಾಗಿರಲಿದೆ. ಈ ದೃಷ್ಟಿಯಿಂದ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮೂಡಿರುವುದು ಅಂತಾರಾಷ್ಟ್ರೀಯ ಕಾನೂನಿನ ಪ್ರಮುಖ ಕೊಡುಗೆಯಾಗಿದೆ ಎಂದು ಹೇಳಿದರು.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಂತಾರಾಷ್ಟ್ರೀಯ ಕಾನೂನಿನ ಬೆಳೆವಣಿಗೆಗಳು ದೇಶದ ಸ್ಥಳೀಯ ಕಾನೂನುಗಳ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿವೆ ಎಂದರು.
21 ನೇ ಶತಮಾನದಲ್ಲಿನ ಜಾಗತಿಕ ಬದಲಾವಣೆಗಳಲ್ಲಿ ಅಂತಾರಾಷ್ಟ್ರೀಯ ಕಾನೂನು ಪ್ರಮುಖ ಸ್ಥಾನ ಪಡೆದಿದೆ, ವಿಶ್ವಶಾಂತಿ ಮತ್ತು ರಕ್ಷಣೆಗೆ ಇದು ಅತ್ಯಂತ ಮುಖ್ಯವಾಗಿದೆ ಎಂದರಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಪರಿಣಾಮವಾಗಿ ದೇಶದಲ್ಲಿ ಉಂಟಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೇಲೆ ಅಂತಾರಾಷ್ಟ್ರೀಯ ಕಾನೂನಿನ ಪ್ರೇರಣೆಯಿದೆ. ಸಾರ್ಕ್, ಜಿ 77, ಜಿ 20, ಮುಂತಾದುವುಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು ಎಂದರು.
ಇಂದಿನ ದಿನಮಾನಗಳಲ್ಲಿ ಎದುರಿಸುತ್ತಿರುವ ಖಾಸಗಿತನದ ರಕ್ಷಣೆ ಹಾಗೂ ದತ್ತಾಂಶಗಳ ಸಂರಕ್ಷಣೆಯ ವಿಷಯದಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಮಹತ್ವ ಎದ್ದು ಕಾಣುತ್ತಿದೆ, ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಮೂರು ಮುಖ್ಯ ಅಂಶಗಳಾದ ಅಭಿವೃದ್ಧಿ, ಘನತೆ ಹಾಗೂ ತಾರತಮ್ಯ ರಹಿತ ವಾತಾವರಣ ಬಹಳ ಮುಖ್ಯವಾದವುಗಳು ಎಂದರು.
ದೇಶದ ಮೀಸಲಾತಿ ವ್ಯವಸ್ಥೆಯ ಮಹತ್ವದ ಘಟ್ಟಗಳಾದ ಕೆನೆಪದರ, ಮಹಿಳಾ ಮೀಸಲಾತಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯ ವರೆಗೆ ಅಂತಾರಾಷ್ಟ್ರೀಯ ಕಾನೂನಿನ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟರು.
ಈ ಉಪನ್ಯಾಸದಲ್ಲಿ ಆಯ್ದ ವಿದ್ಯಾರ್ಥಿಗಳ ಪ್ರೆಶ್ನೆಗಳಿಗೆ ಉತ್ತರಿಸಿದ ಪೆÇ್ರ. ಅಂಬ್ರೋಸ್ ಅವರೊಂದಿಗೆ ಮುಕ್ತ ಸಂವಾದ ನೆಡೆಯಿತು. ಈ ಸಂದರ್ಭದಲ್ಲಿ ಕಾನೂನಿನ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪೆÇ್ರ.ಟಿ.ಆರ್. ಮಾರುತಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.