ವರ್ಷದಲ್ಲಿ ಕ್ಷೇತ್ರಕ್ಕೆ 700 ಕೋಟಿ ಅನುದಾನ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.15:- ಕಳೆದ ಒಂದು ವರ್ಷದ ಅವಧಿಯಲ್ಲಿ ಕೆ.ಆರ್ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ 700 ಕೋಟಿ ರೂ.ಗೂ ಹೆಚ್ಚು ಅನುದಾನದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ವರದಿ ಬಿಡುಗಡೆ ಮಾಡಿದರು.
ಶಾಸಕರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಂಗಳವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದು ಒಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡಿರುವ ಹಣವೆಲ್ಲಾ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿರುವುದು. ಈಗಿನ ಸರ್ಕಾರ ಕೇವಲ ಒಂದೂವರೆ ಕೋಟಿ ರೂ ಮಾತ್ರ ನೀಡಿದೆ. ಇನ್ನೂ ಶಾಸಕರ ನಿಧಿಯನ್ನೇ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ಕ್ಷೇತ್ರದ ಸಾರ್ವಜನಿಕರೊಂದಿಗೆ ಸತತ ಸಂಪರ್ಕದಲ್ಲಿ ಇರಬೇಕೆಂಬ ಹಿನ್ನೆಲೆಯಲ್ಲಿ ಮನೆಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ನನ್ನ ದೂರವಾಣಿ ಸಂಖ್ಯೆ ಹಾಗೂ ಆಪ್ತ ಸಹಾಯಕರ ದೂರವಾಣಿ ಸಂಖ್ಯೆ ಮತ್ತು ಕಚೇರಿ ವಿಳಾಸವುಳ್ಳ ಸುಮಾರು 60 ಸಾವಿರಕ್ಕೂ ಹೆಚ್ಚು ಕಾರ್ಡುಗಳನ್ನು ವಿತರಿಸಿ, ಆ ಮೂಲಕ ಹಲವಾರು ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ಸೇರಿ ಪರಿಹರಿಸಲಾಗಿದೆ ಎಂದು ಹೇಳಿದರು.
ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ ಲಲಿತಾದ್ರಿಪುರದಲ್ಲಿ 940 ಆಶ್ರಯ ಗುಂಪು ಯೋಜನೆಯಡಿ ಕ್ಷೇತ್ರದ 940 ಮಂದಿಗೆ ಹಾಗೂ ವರುಣ ಕ್ಷೇತ್ರದ 500 ಮಂದಿ ಫಲಾನುಭವಿಗಳಿಗೆ ಈ ಯೋಜನೆ ಅಡಿ ಮನೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಲಲಿತಾದ್ರಿಪುರ ಕೆಆರ್ ಕ್ಷೇತ್ರದಲ್ಲಿದ್ದರೂ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಬರುತ್ತದೆ. ಹಾಗಾಗಿ ಇಲ್ಲಿ ಎರಡು ಕ್ಷೇತ್ರದ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ 13 ಎಕರೆ ಜಾಗವನ್ನು ಪಡೆದು 202 ಕೋಟಿ ರೂ. ವೆಚ್ಚದಲ್ಲಿ ಆಶ್ರಯ ಗುಂಪು ಮನೆ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಕೆ.ಆರ್.ಕ್ಷೇತ್ರದಲ್ಲಿ ಈಗಾಗಲೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರೆಲ್ಲಾ ತಲಾ 75 ಸಾವಿರರೂಗಳನ್ನು ತಮ್ಮ ವಂತಿಗೆಯಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಪಾವತಿಸಿದ್ದಾರೆ ಎಂದು ತಿಳಿಸಿದರು.
ಕೆ.ಆರ್. ಕ್ಷೇತ್ರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಸುಯೇಜ್ ಫಾರಂ ಎಕ್ಸೆಲ್ ಪ್ಲಾಂಟ್ ನಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಇನ್ನೆರಡು ವರ್ಷದಲ್ಲಿ 7 ಲಕ್ಷ ಟನ್ ಕಸ ತೆರವುಗೊಳಿಸಲಾಗುವುದು. ಇದಕ್ಕಾಗಿ 60 ಕೋಟಿ ರೂಗಳ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೆಆರ್ ಕ್ಷೇತ್ರದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ, ಕೊಲೆಗಳು ನಡೆಯುತ್ತಿವೆ. ಬೀದಿ ಬದಿ ವ್ಯಾಪಾರಿಗಳಿಂದಲೂ ರೋಲ್ ಕಾಲ್ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರ ಪೆÇಲೀಸ್ ಕಮಿಷನರ್ ರಮೇಶ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಒಂದು ವೇಳೆ ರೌಡಿ ಚಟುವಟಿಕೆಗಳು ಮುಂದುವರಿದಿದ್ದೇ ಆದಲ್ಲಿ ಆಯಾ ಠಾಣೆಯ ಇನ್ಸ್‍ಪೆಕ್ಟರ್ ಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಅಧಿಕಾರಿಗಳು ನನ್ನ ವೇಗಕ್ಕೆ ಸ್ಪಂದಿಸುತ್ತಿಲ್ಲ. ಹಾಗಾಗಿ ಸೂಕ್ತವಾಗಿ ಕೆಲಸ ಮಾಡದವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಅನುದಾನ ಬಿಡುಗಡೆಯಲ್ಲಿ ತಾರತಮ್ಯ: ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೆಆರ್ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ 45 ಕೋಟಿ ರೂ ಹಣವನ್ನು ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಕ್ಕೆ ನಗರಪಾಲಿಕೆ ಆಯುಕ್ತರು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸ್ಪೀಕರ್ ಅವರ ಗಮನ ಸೆಳೆದೆ. ಕೂಡಲೇ ಒಂದು ಕ್ಷೇತ್ರಕ್ಕೆ ಮೀಸಲಾದ ಹಣವನ್ನು ಬೇರೊಂದು ಕ್ಷೇತ್ರಕ್ಕೆ ವರ್ಗಾಯಿಸಬಾರದೆಂದು ಅವರು ಸೂಚಿಸಿದರು. ಹಾಗಾಗಿ ಈ ಹಣ ಮುಂದಿನ ತಿಂಗಳಲ್ಲಿ ತಮ್ಮ ಕ್ಷೇತ್ರಕ್ಕೆ ವಾಪಸ್ಸಾಗಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ಶಿವಕುಮಾರ್, ಸುನಂದ ಪಾಲನೇತ್ರ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ಎಚ್.ಜಿ.ಗಿರಿಧರ್, ಮೋಹನ್, ಮುಖಂಡರುಗಳಾದ ಜೋಗಿ ಮಂಜು, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.