ಬಸವಾದಿ ಶರಣರ ಸಂದೇಶಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸಿ: ಡಾ. ಬಿಲಗುಂದಿ
ಕಲಬುರಗಿ:ಮೇ.14:ಯುವ ಪೀಳಿಗೆಗೆ ಬಸವಾದಿ ಶರಣರ ವಿಚಾರ, ಸಂದೇಶಗಳನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ಉದ್ಯಮಿ ಡಾ. ಭೀಮಾಶಂಕರ್ ಬಿಲಗುಂದಿ ಅವರು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಹಾಗೂ ಕಾಯಕ ಶರಣರ ಒಕ್ಕೂಟದ ಸಹಯೋಗದಲ್ಲಿ ನಗರದ ಜಗತ್ ವೃತ್ತದ ಬಳಿ ಇರುವ ಬಸವ ಸಾಂಸ್ಕøತಿಕ ವೇದಿಕೆಯಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹುತ್ವದ ಹಿನ್ನೆಲೆ ಹೊಂದಿರುವ ಲಿಂಗಾಯತ ಸಮಾಜ ಅನೇಕ ಉಪ ಪಂಗಡಗಳಿಂದ ಛಿದ್ರಗೊಂಡಿದ್ದು, ಶರಣರ ಕನಸಿನ ಸಮಾಜ ಕಟ್ಟಲು ತಂದೆ ತಾಯಿಗಳು ಮಕ್ಕಳಿಗೆ, ಯುವಕರಿಗೆ ಪ್ರೇರಣೆ ನೀಡಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಬಸವರಾಜ್ ಸಾದರ್ ಅವರು ವರ್ತಮಾನಕ್ಕೂ ವಚನ’ ವಿಷಯ ಕುರಿತು ಮಾತನಾಡಿ, ಬಸವಣ್ಣನವರು ರಾಜಬೀದಿ, ರಾಜತೇಜ ಹಾಗೂ ಭಕ್ತಿ ಈ ಮೂರು ಪದಗಳನ್ನು ಬಳಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದರು. ಆ ಮೂಲಕ ರಾಜಕೀಯ ಸಿದ್ಧಾಂತವನ್ನು ರೂಪಿಸಿದರು ಎಂದರು.
ಈ ದೇಶದ ಆಪೆÇೀಶನ ಶಕ್ತಿಯನ್ನು ಬಹಳ ಚೆನ್ನಾಗಿಯೇ ಅರಿತಿದ್ದ ಬಸವಣ್ಣ ತಾನು ಹುಟ್ಟಿದ ಜಾತಿ ನಿರಾಕರಣೆ ಮಾಡಿ, ಕೆಳವರ್ಗದವರ ಜೊತೆ ಸಮೀಕರಣ ಮಾಡಿಕೊಂಡರು. ಒಳಗೊಳ್ಳುವ ಸಂಸ್ಕೃತಿಯನ್ನು ಕಟ್ಟಿಕೊಡುವ ಮೂಲಕ ಸಮ ಸಮಾಜದ ಬಸವಣ್ಣ ಕಟ್ಟಿಕೊಟ್ಟರು ಎಂದು ಅವರು ಹೇಳಿದರು.
ಸ್ಥಗಿತ ಸ್ಥಿತಿಯನ್ನು ಪ್ರಶ್ನಿಸುವುದನ್ನು ಕಲಿಸಿದ ಬಸವಣ್ಣನವರು, ಸ್ತ್ರೀಯರಿಗೆ ಅಸ್ಮಿತೆ ಒದಗಿಸಿದ್ದಲ್ಲದೆ ಮಹಿಳೆಗೆ ಘನತೆಯ ಬದುಕನ್ನು ಒದಗಿಸಿಕೊಟ್ಟರು. ಮತ ಮಾರಾಟದ ವಸ್ತುವಾಗಿದ್ದರಿಂದ ಇಂದು ದೇಶಾದ್ಯಂತ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಬಸವಣ್ಣನವರ ಆರಾಧನೆಯ ಜೊತೆಗೆ ತತ್ವ ಪಾಲನೆ ಅಗತ್ಯ. ಆತ್ಮಸಾಕ್ಷಿಯಾಗಿ ನಡೆದುಕೊಳ್ಳಬೇಕು. ಅಂದಾಗ ಮಾತ್ರ ಬಸವ ಪರಂಪರೆ ಮುಂದುವರಿಯಲು ಸಾಧ್ಯ ಎಂದು ಅವರು ತಿಳಿಸಿದರು.
ರಾಜಕಾರಣಿಗಳು ಕಾಯಕ ವಿಶ್ವವಿದ್ಯಾಲಯ ಆರಂಭಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಡುವ ಹಕ್ಕೊತ್ತಾಯ ನಮ್ಮದಾಗಬೇಕು. ಆಗ ಮಾತ್ರ ಯುವ ಜನಾಂಗಕ್ಕೆ ದಾರಿಯಾಗಲಿ ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ ಅವರು ಮಾತನಾಡಿ, ಬಸವಣ್ಣನವರಂತೆ ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಸಂಸ್ಕೃತಿ ಅಗತ್ಯವಾಗಿದೆ ಎಂದರು. ಭಾಲ್ಕಿ ಹಿರೇಮಠದ ಮಹಾಲಿಂಗ ಶರಣರು ಸಾನ್ನಿಧ ವಹಿಸಿದ್ದರು. ಜಾಗತಿಕ ಲಿಂಗಾಯತ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಕೆ.ಎ. ಕಲಬುರ್ಗಿ ಅವರು ಷಟಸ್ಥಲ ಧ್ವಜಾರೋಹಣ ಮಾಡಿದರು. ಕಾಶಿರಾಯ್ ನಂದೂರಕರ್, ನೀಲಕಂಠ್ ಜಮಾದಾರ್, ಎಸ್.ಎ. ನಿಂಗಪ್ಪ, ಶಿವರಾಯ್ ಮಾಲಿಪಾಟೀಲ್, ಚಿತ್ರಶೇಖರ್ ಕೇಸೂರ್ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಶಿಕಾಂತ್ ಪಸಾರ್ ಅವರು ಸ್ವಾಗತಿಸಿದರು. ಡಾ. ಶಿವಲೀಲಾ ಚಟ್ನಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ್ ಮಹಾಗಾಂವಕರ್, ಡಾ. ಮೀನಾಕ್ಷಿ ಬಾಳಿ, ಡಾ. ನೀಲಾಂಬಿಕಾ ಪಾಟೀಲ್ ಶೇರಿಕಾರ್, ರವೀಂದ್ರ ಶಾಬಾದಿ, ಡಾ. ಗಣಪತಿ ಸಿನ್ನೂರ್, ಡಾ. ಮಲ್ಲಿಕಾರ್ಜುನ್ ವಡ್ಡನಕೇರಿ ಮುಂತಾದವರು ಪಾಲ್ಗೊಂಡಿದ್ದರು.