ತ್ಯಾಜ್ಯ ನೀರಿನ ಶುದ್ಧೀಕರಣ ಘಟಕದಲ್ಲಿ ಮೂವರು ಮಕ್ಕಳ ಶವ ಪತ್ತೆ
ವಿಜಯಪುರ,ಮೇ.14: ಒಂದೇ ಕುಟುಂಬದ ಮೂವರು ಮಕ್ಕಳು ಸೋಮವಾರ ನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇಲ್ಲಿನ ಗಚ್ಚಿನಕಟ್ಟಿ ಕಾಲೋನಿಯ ಮಿಹಿರ್ ಶ್ರೀಕಾಂತ ಜಾನಗೌಳಿ (7) ಹಾಗೂ ಗದಗ ಜಿಲ್ಲೆಯ ಅನುಷ್ಕಾ ಅನಿಲ ದಹಿಂಡೆ (10), ವಿಜಯ ಅನಿಲ ದಹಿಂಡೆ (7) ಮೃತಪಟ್ಟ ದುರ್ದೈವಿ ಮಕ್ಕಳು.
ಈ ಮೂವರು ಮಕ್ಕಳು ನಿನ್ನೆ ಮನೆಯ ಬಳಿ ಆಟವಾಡುತ್ತಿರುವ ಸಂದರ್ಭದಲ್ಲಿ ಮನೆಯ ಬಳಿ ಒಂಟಿ ಬಂದಾಗ ಒಂಟಿಯ ಮೇಲೆ ಒಂದು ಸುತ್ತು ಸವಾರಿ ಮಾಡಿದ್ದಾರೆ. ಬಳಿಕ ಅದೇ ಒಂಟೆಯ ಹಿಂದೆ ಹಿಂದೆ ಹೋಗಿದ್ದಾರೆ. ಮಕ್ಕಳು ಹಾಗೇ ಮನೆಯಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿರುವ ಚರಂಡಿ ಶುದ್ದೀಕರಣ ಘಟಕದ ಬಳಿ ಒಂಟೆಯ ಹಿಂದೆ ತೆರಳಿದ್ದಾರೆ. ಆ ವೇಳೆ ಮಕ್ಕಳು ಆ ನೀರನ ಬಳಿ ಹೋಗಿ ಕಾಲು ಜಾರಿ ಬಿದ್ದು ಸಾವನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮಕ್ಕಳು ಬಹಳ ಹೊತ್ತಿನವರೆಗೆ ಮನೆಗೆ ಬಾರದಿದ್ದಾಗ ಗಾಬರಿಯಾದ ಪೋಷಕರು ಎಲ್ಲ ಕಡೆಗೆ ಹುಡುಕಾಟ ನಡೆಸಿದ್ದರು. ಎಷ್ಟು ಹುಡುಕಾಡಿದರೂ ಮಕ್ಕಳು ಪತ್ತೆಯಾಗಿರಲಿಲ್ಲ. ಆದರೆ ಸೋಮವಾರ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ಮೃತಪಟ್ಟ ಮೂವರು ಮಕ್ಕಳ ಪೈಕಿ ಅನುಷ್ಕಾ, ವಿಜಯ ಇಬ್ಬರು ಮೂಲತಃ ಗದಗ ಜಿಲ್ಲೆಯವರಾಗಿದ್ದು, ತಮ್ಮ ತಾಯಿಯ ಜೊತೆಗೆ ವಿಜಯಪುರಕ್ಕೆ ಅಜ್ಜಿಯ ಮನೆಗೆ ಆಗಮಿಸಿದ್ದರು.
ಮಕ್ಕಳ ಮನೆಯಿಂದ ಸುಮಾರುÀ 1 ಕಿಲೋ ಮೀಟರ್ ದೂರದಲ್ಲಿರುವ ಮಹಾನಗರ ಪಾಲಿಕೆಯ ಚರಂಡಿ ಶುದ್ಧೀಕರಣ ಘಟಕ ಇದೆ. ಆ ಶುದ್ಧೀಕರಣ ಘಟಕದ ಬಳಿಯ ನೀರನ್ನು ಕಂಡು ಮಕ್ಕಳು ಒಳಗೆ ಇಳಿದಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನೂ ಒಂದು ಮಗು ಬಿದ್ದಿದ್ದೆ ಎಂದು ಒಬ್ಬರನ್ನೊಬ್ಬರು ಕಾಪಾಡಲು ಹೋಗಿ ಮೂವರು ಸಾವನಪ್ಪಿರುವ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಮಕ್ಕಳು ತ್ಯಾಜ್ಯ ನೀರು ಶುದ್ಧೀಕರಣ ಘಟಕದ ನೀರಲ್ಲಿ ಹೇಗೆ ಬಿದ್ದಿದ್ದಾರೆ ಎಂಬುವುದೇ ಯಾರಿಗೂ ನಿಖರ ಕಾರಣ ತನಿಖೆಯಿಂದ ಗೊತ್ತಾಗಬೇಕಿದೆ.
ಮಕ್ಕಳ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಅದನ್ನು ಆಧರಿಸಿ ನಿನ್ನೆ ಸಾಕಷ್ಟು ಹುಡಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ ಸೋಮವಾರ ಮೂವರು ಮಕ್ಕಳ ಶವ ಶುದ್ಧೀಕರಣ ಘಟಕದ ನೀರಲ್ಲಿ ಮೇಲೆ ತೇಲಿದ ನಂತರವೇ ಮಕ್ಕಳು ಅಸು ನೀಗಿರುವ ಘಟನೆ ಬೆಳಕಿಗೆ ಬಂದಿದೆ.
ಎಪಿಎಂಸಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ..
ಇಲ್ಲಿನ ಚರಂಡಿ ನೀರು ಶುದ್ಧೀಕರಣ ಘಟಕದ ಮುಖ್ಯ ಗೇಟ್‍ಗೆ ಸೆಕ್ಯೂರಿಟಿ ಗಾರ್ಡ್ ಇರದಿದ್ದಕ್ಕೆ ಈ ದುರಂತ ನಡೆದಿದೆ ಎಂದು ಮಕ್ಕಳ ಸಂಬಂಧಿಕರು ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದರು.
ಅಲ್ಲದೆ ಈ ಶುದ್ಧೀಕರಣ ಘಟಕ್ಕಕ್ಕೆ ಯಾವುದೇ ಕಾಂಪೌಂಡ್ ಇರದ ಕಾರಣ ಮೂವರ ಮಕ್ಕಳು ಒಳಗೆ ಹೋಗಿ ಸಾವಿಗೀಡಾಗಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.