ಬಿದ್ದಮರ ತೆರವುಗೊಳಿಸಲು ಆಗ್ರಹ

ನವಲಗುಂದ, ಮೇ 14: ಪಟ್ಟಣದಲ್ಲಿ ಏಪ್ರಿಲ್ 19 ರಂದು ಸುರಿದ ಮಳೆ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದವು. ಆ ಸಂದರ್ಭದಲ್ಲಿ ಮಹದಾಯಿ ಹೋರಾಟಗಾರರು ಪ್ರತಿಭಟನೆಗೆ ಕುಳಿತ ಕಟ್ಟಡ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸದ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ಕೂಡ ಮರವನ್ನು ತೆರವುಗೊಳಿಸಿಲ್ಲ. ಮರ ಯಾರ ಮೇಲಾದರೂ ಬೀಳುವ ಆತಂಕ ಶುರುವಾಗಿದೆ. ಕಟ್ಟಡ ತಾಲ್ಲೂಕಾ ಪಂಚಾಯಿತಿಗೆ ಸೇರಿದ್ದರಿಂದ ತೆರವು ಕಾರ್ಯ ಮಾಡದ ತಾಪಂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಲಾಗುತ್ತಿದೆ.
ಬೇರೆ ಕಡೆ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ. ಆದರೆ ಈ ಮರವನ್ನು ಇನ್ನೂ ತೆರವು ಮಾಡಿಲ್ಲ ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟಗಾರ ಮಲ್ಲೇಶ ಉಪ್ಪಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಬಾರದು. ಸಾರ್ವಜನಿಕರ ರಕ್ಷಣೆಗೆ ಎಂಬ ಕಲ್ಪನೆ ಅಧಿಕಾರಿಗಳಿಗೆ ಇರಬೇಕು. ದುರಂತಗಳಿಗೆ ಕಾರಣವಾಗುವಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.