ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.14:- ನಗರದ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗಗಳ ವತಿಯಿಂದ ಸೋಮವಾರ ಡಾಟಾ ಮಾಡೆಲಿಂಗ್ ಮತ್ತು ಆಪ್ಟಿಮೈಸೇಶನ್ ಕುರಿತು 5 ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ಕಾಲೇಜಿನ ಬಿ.ಸಿ.ಲಿಂಗಯ್ಯ ಸಭಾಂಗಣದಲ್ಲಿ ಚಾಲನೆ ದೊರೆಯಿತು.
ಯುಎಸ್‍ಎ ಒಕ್ಲಹೋಮ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಲಕ್ಷ್ಮೀವರಹನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಡೇಟಾ ಸೈನ್ಸ್ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದು, ಯುವ ಸಮೂಹವನ್ನು ಆಕರ್ಷಿಸುತ್ತಿದೆ. ಇದರಿಂದ ಉದ್ಯೋಗಾವಕಾಶವೂ ಲಭಿಸುತ್ತದೆ. ಈ ಕೋರ್ಸ್ ಗಣಿತದ ವಿವಿಧ ಬಗೆಯ ತಂತ್ರಗಳನ್ನು ವಿವರಿಸುತ್ತದೆ. ದತ್ತಾಂಶ ವಿಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಸಂಶೋಧನಾ ವಿಧಾನದಲ್ಲೂ ತ್ವರಿತ ಪರಿಣಾಮ ಉಂಟು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾವರ್ಧಕ ಸಂಘದ ಖಜಾಂಚಿ ಶ್ರೀಶೈಲ ರಾಮಣ್ಣನವರ್, ವಿವಿಸಿಇ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ, ಡೀನ್ ಡಾ.ಬಿ.ಸಿ ಅಶೋಕ್, ವಿಭಾಗದ ಮುಖ್ಯಸ್ಥೆ ಪೂಜಾ.ಎಂ.ಆರ್, ಡಾ.ರವಿಕುಮಾರ್.ವಿ, ಡಾ.ವಿನುತಾ.ಡಿ.ಸಿ ಉಪಸ್ಥಿತರಿದ್ದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 45 ಮಂದಿ ಭಾಗವಹಿಸಿದ್ದರು. ಮೇ 17ರವರೆಗೆ ಕಾರ್ಯಾಗಾರ ನಡೆಯಲಿದೆ.