ಪರಿಹಾರಧನ ವಿತರಣೆಯಲ್ಲಿ ವಿಳಂಬ: ಪ್ರತಿಭಟನೆ
ಚನ್ನಮ್ಮನ ಕಿತ್ತೂರು, ಮೇ14: ಸರ್ಕಾರ ಈಗಾಗಲೇ ಕಿತ್ತೂರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದರೂ ಇಲ್ಲಿಯ ರೈತರಿಗೆ ಪರಿಹಾರ ಧನ ವಿತರಿಸುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕಛೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಹಬೀಬ ಶಿಲ್ಲೇದಾರ ಮಾತನಾಡಿ ರೈತರಿಗೆ ಸರ್ಕಾರ ಪರಿಹಾರ ಬಿಡುಗಡೆಗೊಳಿಸಿದರು. ಅಧಿಕಾರಿಗಳು ಮುಟ್ಟಿಸಲು ಮುಂದಾಗುತ್ತಿಲ್ಲ. ರೈತರು ಕಛೇರಿಗೆ ಅಲೆದಾಡಿದರು ಯಾವುದೇ ಮಾಹಿತಿ ತಿಳಿಸುತ್ತಿಲ್ಲ ಎಂದರು.
ಕಿತ್ತೂರ ಕರ್ನಾಟಕ ಜಾಗೃತಿ ಸಂಘದ ಮುಖಂಡ ಭೀಷ್ಟಪ್ಪ ಶಿಂಧೆ ಮಾತನಾಡಿ ಸರ್ಕಾರ ನೀಡಿರುವ ಎರಡು ಸಾವಿರ ಹಾಗೂ ಕೋರ್ಟ ಮೆಟ್ಟಿಲೇರಿ ಪಡೆದ ಬರಪರಿಹಾರ ಖಾತೆಗೆ ಜಮೆಯಾಗದಿರುವುದರಿಂದ ರೈತರು ಸಂಕಷ್ಟದಲ್ಲಿದ್ದು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಆದ್ದರಿಂದ ದಂಡಾಧಿಕಾರಿಗಳು ಪರಿಹಾರ ಧನವನ್ನು ಅತಿ ಶೀಘ್ರದಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಒಂದು ವಾರದ ಒಳಗಾಗಿ ಕ್ರಮ ಕೈಗೊಂಡು ಸರ್ಕಾರ ಬರಪೀಡಿತವೆಂದು ಘೋಷಣೆ ಮಾಡಿ ಬಿಡುಗಡೆಗೊಳಿಸಿದ ಹಣವನ್ನು ರೈತರಿಗೆ ಮುಟ್ಟಿಸುವಂತೆ ಆಗಬೇಕು. ನಮ್ಮ ಮನವಿಗೆ ಸ್ಪಂಧಿಸದಿದ್ದರೆ ಮೇ 20ರಂದು ಕಿತ್ತೂರ ಕನಾಟಕ ರೈತ ಜಾಗೃತಿ ಸಂಘದಿಂದ ಹಾಗೂ ವಿವಿಧ ರೈತ ಸಂಘಟಣೆಗಳಿಂದ ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿ ಉಗ್ರವಾಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಹಾದಿಮನಿ ತಾವು ಮನವಿ ನೀಡಿದ ವಿಷಯ ಕುರಿತು ನಮ್ಮ ತಾಲೂಕಿನಲ್ಲಿ ಸುಮಾರು 16.169 ರೈತರಿಗೆ ರೂ. 3.8 ಕೋಟಿ ಬರಪರಿಹಾರದ ಹಣ ಜಮೆಯಾಗಿದೆ ಇನ್ನುಳಿದ ಬಾಕಿ 904 ರೈತರ ಬರ ಪರಿಹಾರದ ಹಣ ತಾಂತ್ರಿಕ ದೋಷದಿಂದ ಜಮೆಯಾಗದೇ ಇರುವ ಕಾರಣ ಅಂತಹ ರೈತರಿಗೆ ದೂರವಾಣಿ ಮುಖಾಂತರ ಕರೆ ಮೂಲಕ ಆಧಾರ್ ಮತ್ತು ಬ್ಯಾಂಕ ಪಾಸ್‍ಬುಕ್ ಪರಿಶೀಲನೆ ಮಾಡಲು ತಿಳಿಸಲಾಗಿದೆ. ಪರಿಶೀಲನೆ ನಂತಹ ದೋಷ ಪರಿಹಾರ ನಂತರ ರೈತರ ಖಾತೆಗೆ ಬರಪರಿಹಾರದ ಹಣ ಸರ್ಕಾರ ಹಂತ-ಹಂತವಾಗಿ ಜಮೆ ಮಾಡುತ್ತದೆ ಎಂದು ತಿಳಿಸಿದರು.
ಈ ವೇಳೆ ರೈತ ಮುಖಂಡರುಗಳಾದ ಅಪ್ಪೇಶ ದಳವಾಯಿ, ಮಡಿವಾಳಪ್ಪ ವರಗನ್ನವರ, ಶಿವಪ್ಪ ಚಿನ್ನನವರ, ಅಶೋಕ ಕೂಗಟಿ, ಸೇರಿದಂತೆ ರೈತರು ಇದ್ದರು.